ಲೋಕಸಭಾ ಚುನಾವಣೆ: 22ರ ನಂತರ ಬಿಜೆಪಿ - ಜೆಡಿಎಸ್‌ ಸೀಟು ಹಂಚಿಕೆ ನಿರ್ಧಾರ

KannadaprabhaNewsNetwork | Updated : Jan 18 2024, 04:29 PM IST

ಸಾರಾಂಶ

ಅಮಿತ್‌ ಶಾ, ನಡ್ಡಾ ಭೇಟಿಯಾದ ಜೆಡಿಎಸ್‌ ಮುಖಂಡರಾದ ಎಚ್‌ಡಿಕೆ, ನಿಖಿಲ್‌ ಲೋಕಸಭೆಗೆ ಸೀಟು ಹಂಚಿಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಈಗ ಅಂತಿಮ ಹಂತಕ್ಕೆ ಬರದ ಕಾರಣ ರಾಮಮಂದಿರ ಉದ್ಘಾಟನೆ ಬಳಿಕ ಮತ್ತೊಮ್ಮೆ ಚರ್ಚೆ ನಡೆಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಮತ್ತು ಚುನಾವಣೆ ಸಿದ್ಧತೆ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಪ್ರಾಥಮಿಕ ಹಂತದ ಚರ್ಚೆ ನಡೆದಿದ್ದು, ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.

ಬುಧವಾರ ದೆಹಲಿಗೆ ತೆರಳಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. 

ಅಮಿತ್‌ ಶಾ ನಿವಾಸದಲ್ಲಿ ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಮಾತುಕತೆ ವೇಳೆ ಜೆಡಿಎಸ್‌ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮತ್ತು ಮಾಜಿ ಸಂಸದ ಕುಪೇಂದ್ರ ರೆಡ್ಡಿ ಸಹ ಭಾಗಿಯಾಗಿದ್ದರು.

ಕುಮಾರಸ್ವಾಮಿ ಅವರು ರಾಜ್ಯದ ಪ್ರತಿಯೊಂದು ವಿದ್ಯಮಾನವನ್ನು ಅಮಿತ್‌ ಶಾ ಅವರ ಗಮನಕ್ಕೆ ತಂದರು. ರಾಜ್ಯದ ಯಾವ ಕ್ಷೇತ್ರಗಳಲ್ಲಿ ಜೆಡಿಎಸ್‌ ಸಾಮರ್ಥ್ಯ ಎಷ್ಟಿದೆ, ಬಿಜೆಪಿಯ ಶಕ್ತಿ ಎಷ್ಟಿದೆ ಎಂಬುದರ ವಿವರಗಳನ್ನು ಕುಮಾರಸ್ವಾಮಿ ಅವರು ನೀಡಿದರು. ನಾಲ್ಕರಿಂದ ಐದು ಕ್ಷೇತ್ರಗಳ‍ನ್ನು ನೀಡುವ ಬಗ್ಗೆಯೂ ಪ್ರಸ್ತಾಪಿಸಿದರು ಎನ್ನಲಾಗಿದೆ.

ಕ್ಷೇತ್ರ ಹಂಚಿಕೆಯ ಸೇರಿದಂತೆ ಜೆಡಿಎಸ್ ಪಕ್ಷ ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರುವ ಪ್ರಕ್ರಿಯೆಗಳೆಲ್ಲವನ್ನೂ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮುಗಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಚರ್ಚೆ ನಡೆಸಲಾಗುತ್ತದೆ. 

ಬಳಿಕ ಎಲ್ಲವನ್ನೂ ಅಂತಿಮಗೊಳಿಸೋಣ ಎಂಬುದಾಗಿ ಅಮಿತ್‌ ಶಾ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳೆಲ್ಲವನ್ನೂ ಎನ್‌ಡಿಎ ಮೈತ್ರಿಕೂಟ ಗೆದ್ದು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು. 

ಅದಕ್ಕಾಗಿ ಕರ್ನಾಟಕದಲ್ಲಿ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಒಟ್ಟಾಗಿ ಮಾಡಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡು ಅತ್ಯಂತ ವಿಶ್ವಾಸ, ನಂಬಿಕೆಯ ಆಧಾರದ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ನಿರ್ಧಾರಗಳನ್ನು ಮಾಡುವುದಾಗಿ ಕುಮಾರಸ್ವಾಮಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸುವ ಮೊದಲೇ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಜನರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಗಮನಕ್ಕೆ ಪರಿಣಾಮಕಾರಿಯಾಗಿ ತರಬೇಕು ಎಂದು ಉಭಯ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.

Share this article