ಯಲಬುರ್ಗಾ:
ಮುಸ್ಲಿಂಮರ ಮೀಸಲಾತಿಗಾಗಿ ಸಂವಿಧಾನ ಬದಲಾಯಿಸುತ್ತೇವೆಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ಖಂಡಿಸಿ ಮಂಗಳವಾರ ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳ ಮೂಲಕ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗುತ್ತಾ ಡಿ.ಕೆ. ಶಿವಕುಮಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿದ್ದರು. ಇದೀಗ ಅದೇ ಪಕ್ಷದ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಒಂದು ಸಮುದಾಯ ವೋಟ್ ಬ್ಯಾಂಕ್‌ಗಾಗಿ ಸಂವಿಧಾನ ಬದಲಾಯಿಸಲು ಸಿದ್ಧ ಎಂದು ಹೇಳಿಕೆ ನೀಡಿರುವುದು ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಇವರ ಡೊಂಗಿತನ ಬಯಲಾಗಿದೆ. ಇದನ್ನು ರಾಜ್ಯದ ಜನರು ಗಮನಿಸಿ ಬೇರು ಸಮ್ಮೇತ ಕಾಂಗ್ರೆಸ್ ಕಿತ್ತೆಸೆಯುವ ಕಾಲ ದೂರವಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಡಿ.ಕೆ. ಶಿವಕುಮಾರ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಅಪಚಾರ ವ್ಯಸಗಿದ್ದಾರೆ. ಇಂತಹವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮುಖ್ಯಮಂತ್ರಿಗಳು ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ೧೪ ಸೈಟ್ ಅಕ್ರಮವಾಗಿ ಪಡೆದು ಮರಳಿಸಿದ್ದಾರೆ. ಇಂತಹ ಭ್ರಷ್ಟ ಸರ್ಕಾರದ ವಿರುದ್ಧ ರಾಜ್ಯದ ಜನತೆ ರೋಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಶಾಸಕ ಬಸವರಾಜ ರಾಯರಡ್ಡಿ ಅವರು ತಮ್ಮ ಹಿಂದೆ ಪುಂಡರನ್ನು ಕಟ್ಟಿಕೊಂಡು ನಮ್ಮಂತಹವರ ಮೇಲೆ ಆಶ್ಲೀಲ ಪದ ಬಳಸುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಕೆಲಸ ಮಾಡದಿದ್ದರೆ ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಶಿರಸ್ತೆದಾರ ದೇವರಡ್ಡಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಬಸವಲಿಂಗಪ್ಪ ಭೂತೆ, ಶಿವಶಂಕರರಾವ್ ದೇಸಾಯಿ, ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಬಿಜೆಪಿ ತಾಲೂಕಾಧ್ಯಕ್ಷ ಮಾರುತಿ ಗಾವರಾಳ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖಂಡರಾದ ಸಿ.ಎಚ್. ಪಾಟೀಲ, ತಾಲೂಕಾಧ್ಯಕ್ಷ ಬಸವರಾಜ ಗುಳಗುಳಿ, ಕರಿಬಸಯ್ಯ ಬಿನ್ನಳ, ದ್ಯಾಮಣ್ಣ ಉಜ್ಜಲಕುಂಟಿ, ಕಳಕಪ್ಪ ತಳವಾರ, ವಸಂತ ಭಾವಿಮನಿ, ಬಸವರಾಜ ಹಾಳಕೇರಿ, ಶಿವಕುಮಾರ ನಾಗಲಾಪುರಮಠ, ಶರಣಪ್ಪ ಇಳಗೇರ, ಕಲ್ಲೇಶ ಕರಮುಡಿ, ಶಿವಲೀಲಾ ದಳವಯಿ, ಬಸವರಾಜ ಅಧಿಕಾರಿ, ಸಮತೋಷಿಯಾ ಜೋಶಿ, ಶಂಕರಗೌಡ ಗೆದಗೇರಿ, ಕಳಕನಗೌಡ ನಾಗನಗೌಡ್ರ, ಹನುಮಂತ ರಾಠೋಡ, ಶಂಕ್ರಪ್ಪ ಭಾವಿಮನಿ, ಮಹೇಶ ಭೂತೆ, ಲಕ್ಷ್ಮಣ ಕಾಳೆ, ಈರಪ್ಪ ಬಣಕಾರ, ಅಶೋಕ ಅರಕೇರಿ, ದೊಡ್ಡಯ್ಯ ಗುರುವಿನ್, ಸುರೇಶ ಹೊಸಳ್ಳಿ, ರುದ್ರಯ್ಯ ಸೇರಿದಂತೆ ಮತ್ತಿತರರು ಇದ್ದರು.