ನಾಳೆಯಿಂದ ಬೆಂಗಳೂರಿನಲ್ಲಿ ಒಳ ಮೀಸಲಾತಿ ಜಾರಿ ಕುರಿತು ವಿಚಾರ ಸಂಕಿರಣ

KannadaprabhaNewsNetwork | Published : Mar 26, 2025 1:38 AM

ಸಾರಾಂಶ

ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಭವಿಷ್ಯದ ಹೋರಾಟದ ಬಗ್ಗೆ ವಿಶೇಷ ಸಭೆ ಜರುಗುವುದು ಎಂದು ಫರ್ನಾಂಡಿಸ್‌ ಹಿಪ್ಪಳಗಾಂವ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಬಿಆರ್‌ ಅಂಬೇಡ್ಕರ್‌ ಭವನದಲ್ಲಿ ಮಾ. 27 ಹಾಗೂ 28ರಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರಾಧ್ಯಕ್ಷ ಮಂದಾಕೃಷ್ಣ ಮಾದಿಗ ಮಾರ್ಗದರ್ಶನದಲ್ಲಿ ಒಳ ಮೀಸಲಾತಿ ಜಾರಿ ಕುರಿತಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್‌ ಹಿಪ್ಪಳಗಾಂವ್‌ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 27ರಂದು ಕಾರ್ಯಾಗಾರ ಹಾಗೂ ರಾಜ್ಯ ಕಾರ್ಯ ಕಾರಿಣಿ ಸಭೆ ಜರುಗುವುದು. 28ರಂದು ಒಳ ಮೀಸಲಾತಿ ಬೆಂಬಲಿಸುವ ಎಲ್ಲ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಐಎಎಸ್, ಐಪಿಎಸ್‌, ಕೆಎಎಲ್‌ ಹಾಲಿ, ಮಾಜಿ ಅಧಿಕಾರಿಗಳು, ಹಾಲಿ ಮಾಜಿ ಶಾಸಕರು, ಸಚಿವರು ಜೊತೆಗೆ ಮಾದರ ಚನ್ನಯ್ಯ ಸ್ವಾಮೀಜಿಗಳು ಸೇರಿದಂತೆ ಇತರೆ ಮಠಾಧೀಶರು ಪಾಲ್ಗೊಳ್ಳುವರು ಎಂದು ತಿಳಿಸಿದರು.ಮಧ್ಯಾಹ್ನದ ಬಳಿಕ ಮುಂದಿನ ಹೋರಾಟದ ಬಗ್ಗೆ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಭವಿಷ್ಯದ ಹೋರಾಟದ ಬಗ್ಗೆ ವಿಶೇಷ ಸಭೆ ಜರುಗುವುದು. ಈ ಎರಡು ದಿನದ ಕಾರ್ಯಾಗಾರ ಹಾಗೂ ಸಭೆಯಲ್ಲಿ ಜಿಲ್ಲೆಯ ಸಮಾಜ ಬಾಂಧವರು, ವಕೀಲರು, ಒಳ ಮೀಸಲಾತಿ ಪರ ಹೋರಾಟಗಾರರು, ಸಂಘಟನೆಗಳ ಪ್ರಮುಖರು, ಒಟ್ಟಾರೆ ಒಳ ಮೀಸಲಾತಿಯನ್ನು ಬೆಂಬಲಿಸುವ ಎಲ್ಲರು ಪಾಲ್ಗೊಳ್ಳಬೇಕೆಂದು ಫರ್ನಾಂಡಿಸ್‌ ಕರೆ ನೀಡಿದರು.ರಾಜಕೀಯ ಷಡ್ಯಂತ್ರ ಅಡ್ಡಿ :

ಒಳ ಮೀಸಲಾತಿ ಜಾರಿ ವಿಳಂಬವಾಗಲು ರಾಜಕೀಯ ಷಡ್ಯಂತ್ರವೇ ಕಾರಣ ಎಂದು ಫರ್ನಾಂಡಿಸ್‌ ಹಿಪ್ಪಳಗಾಂವ್‌ ತಿಳಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಾಲಿ ಸಮಾಜ ಕಲ್ಯಾಣ ಸಚಿವ ಎಚ್‌ಸಿ‌ ಮಹಾದೇವಪ್ಪ ಅವರೇ ನಮ್ಮ‌ ಹಾಗೂ ಪರಿಶಿಷ್ಟ ಬಲಗೈ ಬಂಧುಗಳ‌ ಮಧ್ಯ ಬಿರುಕು ಮೂಡಿಸಲು ಪ್ರಯತ್ನಿಸಿರುವರು ಆದರೆ, ನಾವಿಬ್ಬರೂ ಯಾವತ್ತೂ ಒಂದೇ ನಾಣ್ಯದ ಎರಡು ಮುಖಗಳು. ಹಳ್ಳಿಗಳಲ್ಲಿ ನಮಗೆ ಹಾಗೂ ಪರಿಶಿಷ್ಟ ಬಲಗೈ ಜನಗಳಿಗೆ ಉತ್ತಮ‌ ಬಾಂಧವ್ಯ ಇದೆ. ಸಂಬಂಧ ಸರಿಯಾಗಿದೆ. ಹಾಲಿನಂಥ ನಮ್ಮ ಸಂಬಂಧದಲ್ಲಿ ಹುಳಿ ಹಿಂಡುವಂಥ ಕಾರ್ಯವನ್ನು ಈ ನಾಯಕರು ಬಿಡಬೇಕು ಎಂದರು.ಡಿಎಸ್‌ಎಸ್‌ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಹಾಗೂ ಮಾವಳ್ಳಿ‌ ಶಂಕರ್‌ ಇಬ್ಬರು ಬೆಂಗಳೂರಿನ ಹೋರಾಟದ ಸಂದರ್ಭದಲ್ಲಿ ಒಳ ಮೀಸಲಾತಿ ಹೋರಾಟ ಜಾರಿಯಾಗಬೇಕೆಂದು ಒತ್ತಾಯಿಸಿದ್ದರು. ಈಗ ಅವರೇ ವಿರೋಧಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಕಾಂತರಾಜ ವರದಿ ಜಾರಿ ಮಾಡದೇ ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ‌ ಅವರ ವರದಿ ಜಾರಿ ಮಾಡಬೇಕು. ಎರಡು ತಿಂಗಳ ಹಿಂದೆ ನಾಗ ಮೋಹನದಾಸ್‌ ವರದಿ ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ ಅದು ವಿಳಂಬವಾಗುತ್ತಿರುವುದಕ್ಕೆ ಫರ್ನಾಂಡಿಸ್‌ ಕಳವಳ ವ್ಯಕ್ತಪಡಿಸಿದರು.ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ್‌, ಉಪಾಧ್ಯಕ್ಷ ಕಮಲಾಕರ ಹೆಗಡೆ, ಜಿಲ್ಲಾ ವಕ್ತಾರ ಶಿವಣ್ಣ ಹಿಪ್ಪಳಗಾಂವ್‌, ಜಿಲ್ಲಾ ಕಾರ್ಯದರ್ಶಿ ದತ್ತಾತ್ರೆಯ ಜ್ಯೋತಿ, ಸಮಾಜ ಮುಖಂಡ ಸುಧಾಕರ ಸೂರ್ಯವಂಶಿ, ಮಹಾ ಪ್ರಧಾನ ಕಾರ್ಯದರ್ಶಿ ರಾಹುಲ‌ ನಂದಿ ಇದ್ದರು.

Share this article