- ಆಸ್ತಿ ತೆರಿಗೆ ಹೆಚ್ಚಳ, ಜಲಸಿರಿ ಯೋಜನೆಯಡಿ ಸುಲಿಗೆ, ಮಿತಿಮೀತಿದ ಭ್ರಷ್ಟಾಚಾರ: ಕೆ.ಪ್ರಸನ್ನ ಕುಮಾರ ಆರೋಪ
- - -
ಕನ್ನಡಪ್ರಭ ವಾರ್ತೆ, ದಾವಣಗೆರೆಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ, ನಿಯಮಬಾಹಿರವಾಗಿ ಜಲಸಿರಿ ಬಿಲ್ ನೀಡುತ್ತಿರುವುದು, ಮಿತಿಮೀರಿದ ಭ್ರಷ್ಟಾಚಾರ ಖಂಡಿಸಿ ವಿಪಕ್ಷ ಬಿಜೆಪಿ ಸದಸ್ಯರು ಸೋಮವಾರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಾಲಿಕೆಯಿಂದ ಸುಲಿಗೆ ತಂತ್ರ:
ದಿನದ 24 ಗಂಟೆ ನೀರು ಕೊಡಬೇಕೆಂಬ ನಿಯಮ ಜಯಸಿರಿ ಕಾಮಗಾರಿ ಗುತ್ತಿಗೆ ಒಪ್ಪಂದದಲ್ಲೇ ಇದೆ. ಆದರೆ, ಇಂದಿಗೂ ಹಿಂದೆ ನೀಡುತ್ತಿದ್ದಂತೆ ಕೆಲ ಮನೆಗಳಿಗೆ 300-500 ಲೀಟರ್ ನೀರನ್ನು ನಾಲ್ಕೈದು ದಿನಕ್ಕೊಮ್ಮೆ ನೀಡಲಾಗುತ್ತಿದೆ. ಪ್ರತಿ ಮನೆಗೆ ಅಗತ್ಯವಿರುವಷ್ಟು ನೀರು ಪೂರೈಸದೇ, ಪದೇಪದೇ ನೀರಿನ ಕರ ಕಟ್ಟುವಂತೆ ಒತ್ತಡ ಹೇರಲಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ, ನಿಯಮಾನುಸಾರ ನೀರು ಪೂರೈಸುವವರೆಗೂ ಯಾವುದೇ ಕಾರಣಕ್ಕೂ ಬಿಲ್ ನೀಡಬಾರದು ಎಂದು ಪ್ರಸನ್ನ ತಾಕೀತು ಮಾಡಿದರು.
ಸದಸ್ಯ, ಮಾಜಿ ಮೇಯರ್ ಎಸ್.ಟಿ.ವೀರೇಶ ಮಾತನಾಡಿ, ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಆಸ್ತಿ ತೆರಿಗೆ ದುಪ್ಪಟ್ಟುಗೊಳಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಇಲ್ಲ. ಗ್ಯಾರಂಟಿ ನೆಪದಲ್ಲಿ ಜನರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ಸಿನ ಪಾಲಿಕೆ ಸದಸ್ಯರು ತಾವು ಆಸ್ತಿ ತೆರಿಗೆ ಹೆಚ್ಚಳದ ಪರ ಇದ್ದಾರೋ ಅಥಾ ವಿರುದ್ಧವೇ ಎಂಬುದನ್ನು ಜನತೆಗೆ ಬಹಿರಂಗಪಡಿಸಲಿ. ಹಳೆಯ ದರದಂತೆ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದರು.
- - - ಬಾಕ್ಸ್
ದಾವಣಗೆರೆ ಪಾಲಿಕೆಯಲ್ಲಿ ಆಡಳಿತ ಪಕ್ಷವಿದ್ದರೂ ಇಲ್ಲದ ಸ್ಥಿತಿ ಇದೆ. ಜನರ ಸಮಸ್ಯೆಗೆ ಸ್ಪಂದಿಸದ ನಿಷ್ಕ್ರಿಯ ಅಧಿಕಾರಿಶಾಹಿಗಳ ಆಡಳಿತ ಇಲ್ಲಿದೆ. ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲದಂತಹ ಸ್ಥಿತಿ ಬಂದೊದಗಿದೆ. 3 ತಿಂಗಳಾದರೂ ಸಾಮಾನ್ಯ ಸಭೆ ಕರೆಯಲು ಮೇಯರ್, ಆಯುಕ್ತರು ಕ್ರಮ ಕೈಗೊಳ್ಳದಿರುವುದು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಕರ್ನಾಟಕ ಪೌರ ನಿಗಮದ ಅಧಿನಿಯಮ 1976, ಅಧ್ಯಾಯ 3 ನಿಯಮ 2ರ ಅಡಿಯಲ್ಲಿ ಮೇಯರ್ ಆಯ್ಕೆಯಾಗುವವರೂ ಹಾಲಿ ಮೇಯರ್ ಅಧಿಕಾರದಲ್ಲಿರಬಹುದು. ಯಾವುದೇ ಸಬೂಬು ಹೇಳದೇ, ಜನರ ಸಮಸ್ಯೆ ಆಲಿಸಲು ತುರ್ತು ಸಾಮಾನ್ಯ ಸಭೆ ಕರೆಯಲಿ. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಡಿ.ಎಸ್.ಉಮಾ ಪ್ರಕಾಶ ಆಗ್ರಹಿಸಿದರು.
-24ಕೆಡಿವಿಜಿ3, 4:
ದಾವಣಗೆರೆ ಪಾಲಿಕೆಗೆ ಬಿಜೆಪಿ ಸದಸ್ಯರು ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಎಸ್.ಟಿ.ವೀರೇಶ, ಉಮಾ ಪ್ರಕಾಶ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.