ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಶ್ರೀವೆಂಕಟರಮಣ ಸ್ವಾಮಿ (ತೋಪಿನ ತಿಮ್ಮಪ್ಪ) ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಗ್ರಾಮದ ಕೆಲವು ಖಾಸಗಿ ವ್ಯಕ್ತಿಗಳು ಟ್ರಸ್ಟ್ ಮಾಡಿಕೊಂಡು ಹಣ ವಸೂಲಿ ಹಾಗೂ ಆಸ್ತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಶ್ರೀವೆಂಕಟರಮಣ ಸ್ವಾಮಿ (ತೋಪಿನ ತಿಮ್ಮಪ್ಪ) ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಗ್ರಾಮದ ಕೆಲವು ಖಾಸಗಿ ವ್ಯಕ್ತಿಗಳು ಟ್ರಸ್ಟ್ ಮಾಡಿಕೊಂಡು ಹಣ ವಸೂಲಿ ಹಾಗೂ ಆಸ್ತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಟಿ.ಶ್ರೀಕಂಠಯ್ಯ ಅವರು ಆರೋಪಿಸಿದರು.೧೯೩೮ರಲ್ಲೇ ಶ್ರೀವೆಂಕಟರಮಣಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ೧೯೮೮ರಲ್ಲಿ ಗ್ರಾಮದ ಕೆಲವರು ಶ್ರೀನಿವಾಸ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಮಾಡಿಕೊಂಡು ಆಡಳಿತ ನಡೆಸಲಾರಂಭಿಸಿದರು. ದೇವಾಲಯದ ಮುಂಭಾಗ ಹಾಗೂ ಹಿಂಭಾಗ ೧೩ ಎಕರೆ ಕೊಡುಗೆಯಾಗಿ ನೀಡಿರುವ ಖುಷ್ಕಿ ಜಮೀನಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರೋಜಮ್ಮ ಎಂಬುವರ ಹೆಸರಿನಲ್ಲಿ ೩ ಎಕರೆ ಜಮೀನಿದ್ದು ಅವರಿಗೆ ಮಕ್ಕಳಿಲ್ಲದ ಕಾರಣ ಜಮೀನನ್ನು ವಿಲ್ ಮಾಡಿ ಆಸ್ತಿಯನ್ನು ದೇವರ ಹೆಸರಿನಲ್ಲಿ ಖಾತೆ ಇಡುವಂತೆ ಬರೆದಿದ್ದಾರೆ. ಆದರೂ ಆಸ್ತಿಯನ್ನು ನೇರವಾಗಿ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ರವೀಂದ್ರ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಸರ್ವೇ ನಂ.೨೦೫ ಮತ್ತು ೨೦೭ರ ಇನ್ನೂ ೧೦ ಎಕರೆ ಜಮೀನು ಅರ್ಚಕರ ಹೆಸರಿನಲ್ಲಿದ್ದು, ಅದನ್ನೂ ಅರ್ಚಕರಿಂದ ಬಲವಂತವಾಗಿ ಕ್ರಯಕ್ಕೆ ಪಡೆದುಕೊಂಡು ಅಧ್ಯಕ್ಷರು-ಕಾರ್ಯದರ್ಶಿಯವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಖಾತೆಯನ್ನು ರದ್ದುಗೊಳಿಸಿ ಎಲ್ಲಾ ಆಸ್ತಿಗಳನ್ನು ದೇವರ ಹೆಸರಿಗೆ ಆರ್‌ಟಿಸಿ ಇಂಡೀಕರಿಸಿಕೊಡುವಂತೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳ ಹಿಂದೆ ಶ್ರೀನಿವಾಸ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಎಂಬ ಹೆಸರನ್ನು ಶ್ರೀತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಎಂದು ಬದಲಾಯಿಸಲಾಗಿದೆ. ಆದರೆ, ಹಿಂದೆ ಇದ್ದ ಟ್ರಸ್ಟ್ ಹೆಸರಿನಲ್ಲೇ ದೇಗುಲಕ್ಕೆ ಸೇರಿದ ಆಸ್ತಿ ಇದೆ. ಹೊಸ ಹೆಸರಿನ ಟ್ರಸ್ಟ್ ರಚನೆಯಾಗಿ ಮೂರು ವರ್ಷಗಳಾಗಿದೆ. ಆದರೂ ಆಸ್ತಿಯನ್ನು ಹೊಸ ಟ್ರಸ್ಟ್ ಹೆಸರಿಗೆ ನೋಂದಾಯಿಸದೆ ಹಳೇ ಟ್ರಸ್ಟ್ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ. ಇದನ್ನು ನೋಡಿದರೆ ಆಸ್ತಿ ಲಪಟಾಯಿಸುವ ಸಂಚು ನಡೆಸಿರುವಂತೆ ಕಂಡುಬರುತ್ತಿದೆ ಎಂದು ಆರೋಪಿಸಿದರು.ಮುಜರಾಯಿ ಇಲಾಖೆಗೆ ದೇಗುಲ ಸೇರಿದ್ದರೂ ಇದುವರೆಗೆ ಆಡಳಿತ ವ್ಯವಹಾರವೆಲ್ಲವೂ ಖಾಸಗಿ ಟ್ರಸ್ಟ್ ಹೆಸರಿನಲ್ಲೇ ನಡೆಯುತ್ತಿದೆ. ತಹಸೀಲ್ದಾರ್, ಮುಜರಾಯಿ ಇಲಾಖೆ ತಹಸೀಲ್ದಾರ್ ಸೇರಿದಂತೆ ಯಾರೊಬ್ಬರೂ ದೇವಸ್ಥಾನವನ್ನು ವಶಕ್ಕೆ ತೆಗೆದುಕೊಳ್ಳುವ ಮನಸ್ಸು ಮಾಡಿಲ್ಲ. ದೇಗುಲಕ್ಕೆ ವಾರ್ಷಿಕ ೨೫ ರಿಂದ ೩೦ ಲಕ್ಷ ರು. ಆದಾಯ ಬರುತ್ತಿದೆ. ದೇಗುಲದಲ್ಲಿ ೬ ಹುಂಡಿಗಳು ಸೇರಿ ಇತರೆ ಮೂಲಗಳಿಂದ ಬರುವ ಆದಾಯಗಳನ್ನು ದೇವರ ಹೆಸರಿಗೆ ಜಮೆ ಮಾಡದೆ ತಮ್ಮ ಇಷ್ಟಾನುಸಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂಷಿಸಿದರು.
ದೇವರ ಹಣ ಪೋಲಾಗದಂತೆ ವ್ಯವಸ್ಥೆ ಮಾಡುವಂತೆ ವಿವಿಧ ಪ್ರಾಧಿಕಾರಗಳಿಗೆ ಬರೆದ ಪತ್ರ ವಿಚಾರ ಟ್ರಸ್ಟಿಗಳಿಗೆ ಗೊತ್ತಾಗಿ ಟ್ರಸ್ಟಿಗಳು ನಮ್ಮ ಮೇಲೆ ಪುಂಡುಪೋಕರಿಗಳನ್ನು ಎತ್ತಿಕಟ್ಟಿ ನಿಂದಿಸುವುದು, ಹಲ್ಲೆ ಮಾಡುವಂತೆ ಪ್ರೇರೇಪಿಸುವುದು, ಕೊಲೆ ಮಾಡುವಂತೆ ಸುಪಾರಿ ಕೊಡುವುದಕ್ಕೆ ಮುಂದಾಗಿದ್ದಾರೆ ಎಂದು ಆತಂಕದಿಂದ ಹೇಳಿದರು.ಕೂಡಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ದೇವರ ಆಸ್ತಿ, ಹಣ ಪೋಲಾಗದಂತೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.