ಬಜೆಟ್ ಪ್ರಸ್ತಾವನೆಗಳಲ್ಲಿನ ಯೋಜನೆಗಳು ಕೇವಲ ತಾತ್ಕಾಲಿಕ ಅಗತ್ಯಗಳಿಗೆ ಸೀಮಿತವಾಗದೆ, ಭವಿಷ್ಯದ ದೃಷ್ಟಿಕೋನ ಹೊಂದಿರುವ, ದೀರ್ಘಕಾಲೀನ ಲಾಭ ನೀಡುವಂತಿರಬೇಕು ಎಂದು ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಬಜೆಟ್ ಪ್ರಸ್ತಾವನೆಗಳಲ್ಲಿನ ಯೋಜನೆಗಳು ಕೇವಲ ತಾತ್ಕಾಲಿಕ ಅಗತ್ಯಗಳಿಗೆ ಸೀಮಿತವಾಗದೆ, ಭವಿಷ್ಯದ ದೃಷ್ಟಿಕೋನ ಹೊಂದಿರುವ, ದೀರ್ಘಕಾಲೀನ ಲಾಭ ನೀಡುವಂತಿರಬೇಕು ಎಂದು ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ 2026–27ನೇ ಸಾಲಿನ ರಾಜ್ಯ ಆಯವ್ಯಯಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಪ್ರಮುಖ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಅವರು ಮಾತನಾಡಿದರು.ಸಾಮಾನ್ಯ ಯೋಜನೆಗಳಿಗೆ ಪ್ರತಿವರ್ಷ ಅನುದಾನ ಲಭ್ಯವಾಗುತ್ತಿರುವುದರಿಂದ, ಈ ಬಾರಿ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ, ನವೀನ ಹಾಗೂ ದೀರ್ಘಕಾಲೀನ ಪರಿಣಾಮ ಬೀರುವ ಯೋಜನೆಗಳಿಗೆ ಆದ್ಯತೆ ನೀಡುವುದು ಅತ್ಯಂತ ಅವಶ್ಯಕವಾಗಿದೆ. ಜಿಲ್ಲೆಯಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಇರುವ ವಾಸ್ತವಿಕ ಸಮಸ್ಯೆಗಳನ್ನು ಮನಗಂಡು, ಪುನಾರಾವರ್ತನೆ ಇಲ್ಲದ, ಜಿಲ್ಲೆಗೆ ನಿಜವಾದ ಅಗತ್ಯವಿರುವ ಯೋಜನೆಗಳನ್ನು ಆಯವ್ಯಯದಲ್ಲಿ ಸೇರಿಸುವುದು ನ್ಯಾಯಸಮ್ಮತ ಹಾಗೂ ಕಾಲೋಚಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಭೌಗೋಳಿಕ ವ್ಯಾಪ್ತಿ, ಜನಸಂಖ್ಯೆಯ ಹೆಚ್ಚಳ ಮತ್ತು ಮೂಲ ಸೌಕರ್ಯಗಳ ಮೇಲಿನ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಸಾಮಾನ್ಯ ಅನುದಾನದಿಂದ ಸಾಧ್ಯವಾಗದ ವಿಶೇಷ ಯೋಜನೆಗಳಿಗೆ ಹೆಚ್ಚುವರಿ ಅನುದಾನವನ್ನು ಕೇಳುವುದು ಸಮಂಜಸವಾಗಿದ್ದು, ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ, ಇಂತಹ ವಿಶೇಷ ಯೋಜನೆಗಳಿಗೆ ಅನುದಾನ ಒದಗಿಸುವಂತೆ ಸರ್ಕಾರದ ಮುಂದೆ ಬೇಡಿಕೆ ಇಡುವುದು ಜಿಲ್ಲೆಯ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯವಾಗಿದ್ದು, ನಾವು ಕೇಳುತ್ತಿರುವುದು ಸಂಪೂರ್ಣವಾಗಿ ನ್ಯಾಯಯುತವಾಗಿದೆ ಎಂದು ಹೇಳಿದರು.ತುಮಕೂರು ಜಿಲ್ಲೆಯಲ್ಲಿ ಸೇಬು ಸೇರಿದಂತೆ ವಿವಿಧ ಹಣ್ಣುಗಳ ಉತ್ಪಾದನೆ ಹೆಚ್ಚುತ್ತಿರುವುದರಿಂದ, ಅವುಗಳ ಗುಣಮಟ್ಟ ಕಾಪಾಡಲು ಹಾಗೂ ನಷ್ಟ ತಪ್ಪಿಸಲು ಶೀಥಲೀಕರಣ ಘಟಕಗಳ ಸ್ಥಾಪನೆ ಅತ್ಯಂತ ಅವಶ್ಯಕವಾಗಿದೆ. ವಿಶೇಷವಾಗಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ಹುಣಸೆಹಣ್ಣಿನ ಸಂಗ್ರಹಣೆ ಹಾಗೂ ಮೌಲ್ಯವರ್ಧನೆಗೆ ಶೀಥಲಗೃಹ ಸೌಕರ್ಯಗಳ ಕೊರತೆ ಇರುವುದರಿಂದ, ಈ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಲು ಒತ್ತಾಯಿಸುತ್ತೇನೆ ಎಂದು ಹೇಳಿದರು.ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆ ಸಮರ್ಪಕವಾಗಿ ನಿರ್ವಹಣೆ ಆಗಬೇಕು. ಹೊರವಲಯದಲ್ಲಿ ಕಬ್ಬನ್ ಪಾರ್ಕ್, ಲಾಲಬಾಗ್, ರೀತಿ ಉದ್ಯಾನಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ, ವಾರಂತ್ಯದಲ್ಲಿ ಜನರು ವಿಹಾರಕ್ಕೆ ಹೋಗಲು ಅನುಕೂಲವಾಗುವಂತೆ ಮಾಡಬೇಕು ಎಂದು ಹೇಳಿದರು.ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿದಲ್ಲಿ ಜಿಲ್ಲೆಗೆ ಹೊಸ ಉದ್ಯಮಗಳು ಸ್ವಾಭಾವಿಕವಾಗಿ ಬರಲಿದ್ದು, ಇದಕ್ಕೆ ಪೂರಕವಾಗುವ ರೀತಿಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಅಗತ್ಯವಾಗಿದೆ.ವಿಶೇಷವಾಗಿ ಕುಡಿಯುವ ನೀರು ಹಾಗೂ ಉತ್ತಮ ರಸ್ತೆ ಸಂಪರ್ಕ ಎಂಬ ಎರಡು ಮೂಲಭೂತ ಸೌಲಭ್ಯಗಳು ಲಭ್ಯವಾದಲ್ಲಿ, ತುಮಕೂರು ಜಿಲ್ಲೆ ಉದ್ಯಮ, ಉದ್ಯೋಗ ಮತ್ತು ವಸತಿ ದೃಷ್ಟಿಯಿಂದ ಜನರನ್ನು ಆಕರ್ಷಿಸುವ ಕೇಂದ್ರವಾಗುತ್ತದೆ ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.