ಧಾರವಾಡ:

ಪುರುಷರ ಹಬ್ಬವೆಂದೇ ಜನಜನಿತವಾದ ಹೋಳಿ ಹಬ್ಬ ಇತ್ತೀಚಿನ ವರ್ಷಗಳಲ್ಲಿ ಮಕ್ಕಳಾದಿಯಾಗಿ ಹೆಣ್ಣು ಮಕ್ಕಳು ಸಹ ಹೋಳಿ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಬುಧವಾರ ಧಾರವಾಡದಲ್ಲಿ ನಡೆದ ಹೋಳಿ ಹಬ್ಬ ಇದಕ್ಕೆ ಸಾಕ್ಷಿಯಾಯಿತು.

ಲಿಂಗ ಭೇದವಿಲ್ಲದೇ ಮುಖಕ್ಕೆ ತರಹೇವಾರಿ ಬಣ್ಣ ಹಚ್ಚಿಕೊಂಡು, ಬಾಯಲ್ಲಿ ತುತ್ತೂರಿ ಊದುತ್ತಾ, ಕೈಯಲ್ಲಿ ಬಣ್ಣದ ನೀರಿನ ಪಿಚಕಾರಿ ಹಿಡಿದುಕೊಂಡು ಹೋಳಿ ಹಬ್ಬದ ಶುಭಾಶಯ ಹೇಳುತ್ತಾ ಬಿರು ಬಿಸಿಲಿನಲ್ಲಿ ಊರೆಲ್ಲಾ ತಿರುಗಾಡಿ ಕಾಮಣ್ಣನ ಹಬ್ಬ ಮಾಡಿದರು.

ಮಂಗಳವಾರ ಸಂಜೆ ಕಾಮಣ್ಣನ ಪೂಜೆ ಮಾಡಿ, ಬುಧವಾರ ನಸುಕಿನಲ್ಲಿ ದಹನ ಮಾಡಲಾಯಿತು. ಕಾಮಣ್ಣನ ಚೆಂಡು ಬೀಳುತ್ತಿದ್ದಂತೆ ಬಣ್ಣದಾಟ ಶುರುವಾಯಿತು. ಪಿಯುಸಿ ಪರೀಕ್ಷೆ ಶುರುವಾಗಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರದಲ್ಲಿವೆ. ಪರೀಕ್ಷೆಗಳ ಬಿಸಿ ಮಧ್ಯೆಯೂ ಮನಸ್ಸಿನಲ್ಲಿದ್ದ ಎಲ್ಲ ರೀತಿಯ ಒತ್ತಡವನ್ನು ಮಕ್ಕಳು ಸೇರಿದಂತೆ ಧಾರವಾಡದ ಜನರು ಬಣ್ಣ ಹಾಗೂ ಬಣ್ಣದ ನೀರಿನಾಟದ ಜತೆಗೆ ಕಳೆದುಕೊಂಡರು.

ಯುವಕ-ಯುವತಿಯರಂತೂ ಬಾಯಿ ಬಡಿದುಕೊಳ್ಳುತ್ತಾ, ಕರ್ಕಶ ಶಬ್ದ ಊದುತ್ತಾ, ಸ್ನೇಹಿತರು, ಸಂಬಂಧಿಕರು, ಮನೆ ಮಂದಿಗೆಲ್ಲ ಬಣ್ಣ ಬಳಿಯುತ್ತಾ ಇಡೀ ಊರು ತಿರುಗಾಡಿ ಬಣ್ಣದ ಹಬ್ಬವನ್ನು ಸಂಭ್ರಮಿಸಿದರು.


ಗಡಿಗೆ ಒಡೆಯುವ ಸ್ಪರ್ಧೆ:

ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಕಾಲೇಜು ರಸ್ತೆಯ ಎಸ್‌ಬಿಐ ವೃತ್ತದಲ್ಲಿ ಸೇರಿದ್ದ ಎರಡು ಸಾವಿರಕ್ಕೂ ಹೆಚ್ಚು ಯುವಕರ ದಂಡು ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಅದೇ ರೀತಿ ವಿನಯ ಕುಲಕರ್ಣಿ ಅಭಿಮಾನಿ ಬಳಗವು ಶಿವಲೀಲಾ ಕುಲಕರ್ಣಿ ನೇತೃತ್ವದಲ್ಲಿ ಸಂಗಮ ವೃತ್ತ, ಗಾಂಧಿಚೌಕ್‌ದಲ್ಲಿ ಹಾಗೂ ದಾಸನಕೊಪ್ಪದಲ್ಲೊಂದು ತಂಡ ಗಡಿಗೆ ಒಡೆಯುವ ಸ್ಪರ್ಧೆ ಹಾಗೂ ರೇನ್ ಡ್ಯಾನ್ಸ್‌ ಇಡೀ ಧಾರವಾಡ ಯುವಕರ ಮನ ಆಕರ್ಷಿಸಿತು. ಈ ಸಮಯದಲ್ಲಿ ಡಿಜೆಗೆ ಯುವಕ-ಯುವತಿಯರು ಕುಣಿದು ಕುಪ್ಪಳಿದರು. ಪ್ರತಿ ವರ್ಷದಂತೆ ಸರ್ಕಾರಿ ನೌಕರರು ತಮ್ಮ ಕುಟುಂಬದೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಣ್ಣದ ಹಬ್ಬ ಆಚರಿಸಿದರು.

ಹಬ್ಬದ ಮುನ್ನಾ ಎರಡ್ಮೂರು ದಿನಗಳಿಂದ ನಗರದಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ಬೈಕ್‌ಗಳು ಓಡಾಡಿದ್ದೇ ಬಂತು. ಬಣ್ಣದ ದಿನ ಒಂದೇ ಬೈಕ್‌ನಲ್ಲಿ ಮೂರು ಜನರು ಅಂಗಿ ಬಿಚ್ಚಿಕೊಂಡು ಬೀದಿ ಬೀದಿ ತಿರುಗಾಡಿದರು. ಯಾವುದೇ ಗದ್ದಲ-ಗೊಂದಲ ಉಂಟಾಗದಂತೆ ಟ್ರಾಫಿಕ್ ಹಾಗೂ ಸಿವಿಲ್ ಪೊಲೀಸರು ಪ್ರಮುಖ ರಸ್ತೆ, ವೃತ್ತದಲ್ಲಿ ಬಂದೋಬಸ್ತ್‌ ವಹಿಸಿದ್ದರು. ಕೀಟಲೆ ಮಾಡುತ್ತಿದ್ದ ಯುವಕರ ಸೊಕ್ಕು ಇಳಿಸುವ ಕಾರ್ಯ ಆಗಾಗ ನಡೆದಿತ್ತು.

ಇನ್ನು, ನಗರ ಮಾತ್ರವಲ್ಲದೇ ಧಾರವಾಡ ಗ್ರಾಮೀಣ ಪ್ರದೇಶದಲ್ಲೂ ಬೆಳಗ್ಗೆ ಕಾಮಣ್ಣನ ದಹನ ನಂತರ ಬಣ್ಣದೋಕುಳಿ ಶಾಂತಿಯುತವಾಗಿ ನಡೆಯಿತು.