ಕನ್ನಡಪ್ರಭ ವಾರ್ತೆ ತುಮಕೂರು
ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್‌ಗೌಡ, ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತು ಹಗರಣಗಳಲ್ಲೇ ಮುಳುಗಿದೆ. ಮಹರ್ಷಿ ವಾಲ್ಮೀಕಿ ನಿಗಮದ 178 ಕೋಟಿ ರು.ಗಳನ್ನು ಚುನಾವಣೆಗೆ ಬಳಸಿಕೊಂಡಿದೆ. ದೇಶದಲ್ಲಿ ಯಾವುದೇ ಸರ್ಕಾರ ಜನರಿಗೆ ಮೀಸಲಾಗಿದ್ದ ಹಣವನ್ನು ರಾಜಕಾರಣಕ್ಕೆ ಬಳಸಿಕೊಂಡಿದೆಯೆಂದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ. ಈಗ ತುಮಕೂರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಗೆ ವಂಚಿಸಿ ಅವರಿಗೆ ಅನ್ಯಾಯ ಮಾಡಿದೆ ಎಂದರು.
ಎಸ್.ಸಿ, ಎಸ್.ಟಿ. ಸಮುದಾಯದವರು ಕೊಳವೆ ಬಾವಿ, ಟ್ಯಾಕ್ಸಿ, ಉದ್ಯಮಶೀಲತೆಗಾಗಿ ಅಭಿವೃದ್ಧಿ ನಿಗಮದಲ್ಲಿ ಮೀಸಲಿಟ್ಟಿದ್ದ ಹಣದಲ್ಲಿ ಕಾಂಗ್ರೆಸ್ ಸರ್ಕಾರ 33 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಬಡ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರವೇ ಮೆರೆಯುತ್ತಿದೆ. ಮೂಡಾ ಹಗರಣ, ವಸತಿ ಇಲಾಖೆ ಹಗರಣ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ತೊಲಗಿ ಭ್ರಷ್ಟಾಚಾರ ಮುಕ್ತ ರಾಜ್ಯವಾಗಬೇಕು ಎಂದು ಒತ್ತಾಯಿಸಿದರು.ತುಮಕೂರಿನ ಜಿಲ್ಲಾ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಫಲಾನುಭವಿ ಅರ್ಜಿದಾರರ ಹೆಸರಿನಲ್ಲಿ ಹಣ ಮಂಜೂರು ಮಾಡಿ ನಕಲಿ ಬ್ಯಾಂಕ್ ಖಾತೆ, ದಾಖಲಾತಿ ಸೃಷ್ಟಿ ಮಾಡಿ ಹಣ ವರ್ಗಾವಣೆ ಮಾಡಿ, ನೈಜ ಫಲಾನುಭವಿಗಳನ್ನು ವಂಚಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು ಶಿಕ್ಷೆಗೆ ಗುರಿಪಡಿಸಬೇಕು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು ಎಂದು ಸುರೇಶ್‌ಗೌಡ ಆಗ್ರಹಿಸಿದರು.
ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಲೂಟಿಗೆ ನಿಂತಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಲೋಟಿ, ವಸತಿ ಇಲಾಖೆಯಲ್ಲಿ ಲೂಟಿ, ಈಗ ಜಿಲ್ಲಾ ಅಭಿವೃದ್ಧಿ ನಿಗಮಗಳನ್ನೂ ಬಿಡದೆ ಲೂಟಿ ಮಾಡುತ್ತಿದೆ. ತುಮಕೂರು ಮಾತ್ರವಲ್ಲದೆ ಬೇರೆ ಜಿಲ್ಲೆಗಳ ನಿಗಮಗಳಲ್ಲೂ 500 ಕೋಟಿ ರು. ನಷ್ಟು ಭ್ರಷ್ಟಾಚಾರ ನಡೆದಿರುವ ಆರೋಪಗಳಿವೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲಾ ಹಿರಿಯ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ನಗರ ಅಧ್ಯಕ್ಷ ಧನುಷ್, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ನಗರ ಅಧ್ಯಕ್ಷ ಬಂಬೂ ಮೋಹನ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಮುಖಂಡರಾದ ಟಿ.ಎಚ್.ಹನುಮಂತರಾಜು, ಸತ್ಯಮಂಗಲ ಜಗದೀಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ವಿಷ್ಣವರ್ಧನ್, ಮುಖಂಡರಾದ ಪುಟ್ಟರಾಜು, ಬನಶಂಕರಿ ಬಾಬು, ಗಣೇಶ್‌ಪ್ರಸಾದ್, ಪ್ರತಾಪ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.