ಕಾಂಗ್ರೆಸ್ ಬೆಂಬಲಿಸಿದರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ: ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ

KannadaprabhaNewsNetwork |  
Published : Apr 23, 2024, 12:45 AM IST
22ಕೆಎಂಎನ್ ಡಿ24 | Kannada Prabha

ಸಾರಾಂಶ

ಬಿಜೆಪಿ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುತ್ತಿದೆ. ಬಡವರಿಗೆ ಮೊದಲ ಹಂತದ ಆದ್ಯತೆ ಇರಬೇಕು ಎಂದು ಪಕ್ಷದ ನಾಯಕರು ಸದಾಕಾಲ ಪ್ರತಿಪಾದನೆ ಮಾಡುತ್ತಾ ಬಂದಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎನ್ನುವ ಮೂಲಕ ಪಕ್ಷ ಬಡವರ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕೋಮುಗಲಭೆಗೆ ಪ್ರಚೋದಿಸುವ ಮತ್ತು ಭಯೋತ್ಪಾದನೆ ಬೆಂಬಲಿಸುವ ಕಾಂಗ್ರೆಸ್ಸಿಗೆ ಬೆಂಬಲ ನೀಡಿದರೆ ಮುಂದಿನ ದಿನಗಳಲ್ಲಿ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಮುಖಂಡ, ಮನ್ಮುಲ್ ನಿರ್ದೇಶಕ ಎಸ್.ಪಿ ಸ್ವಾಮಿ ಸೋಮವಾರ ಹೇಳಿದರು.

ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಗೊರವನಹಳ್ಳಿ ಗ್ರಾಪಂ ಉಪಾಧ್ಯಕ್ಷ ಉಮೇಶ್ ಮತ್ತು ಬೆಂಬಲಿಗರು ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುತ್ತಿದೆ. ಬಡವರಿಗೆ ಮೊದಲ ಹಂತದ ಆದ್ಯತೆ ಇರಬೇಕು ಎಂದು ಪಕ್ಷದ ನಾಯಕರು ಸದಾಕಾಲ ಪ್ರತಿಪಾದನೆ ಮಾಡುತ್ತಾ ಬಂದಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎನ್ನುವ ಮೂಲಕ ಪಕ್ಷ ಬಡವರ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಲೇವಡಿ ಮಾಡಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಜಿಲ್ಲೆಯ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ನಾವೆಲ್ಲ ನಿಮ್ಮ ಪರ ಇದ್ದೇವೆ ಎಂದು ಗೋಸುಂಬೆತನ ಪ್ರದರ್ಶನ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಈಗ ಎಲ್ಲಾ ವರ್ಗದ ಜನರಿಗೆ ಚೆಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆಯಲ್ಲಿ ಇಂತಹ ಪಕ್ಷವನ್ನು ಬೆಂಬಲಿಸುವುದರಿಂದ ರಾಜ್ಯ ಮತ್ತು ಜಿಲ್ಲೆಯ ಜನರಿಗೆ ಒಳಿತಿಗಿಂತ ಕೆಡುಕೆ ಹೆಚ್ಚು. ಜಿಲ್ಲೆಯ ಜನ ನಿರಾಭಿಮಾನಿಗಳಾಗಬೇಡಿ ಸ್ವಾಭಿಮಾನಿಗಳಾಗಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡರಾದ ಮನು ಕುಮಾರ್ ಮತ್ತಿತರು ಪಾಲ್ಗೊಂಡಿದ್ದರು.

ದೇವೇಗೌಡರಿಲ್ಲದಿದ್ದರೆ ಚಲುವರಾಯಸ್ವಾಮಿ ಜಿಪಂ ಸದಸ್ಯರೂ ಆಗುತ್ತಿರಲಿಲ್ಲ: ಪ್ರತಾಪ್ ಸಿಂಹ

ನಾಗಮಂಗಲ:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದವಿಲ್ಲದಿದ್ದರೂ ಚಲುವರಾಯಸ್ವಾಮಿ ಮಂತ್ರಿಯಿರಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿಯೂ ಆಯ್ಕೆಯಾಗುತ್ತಿರಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪಟ್ಟಣದಲ್ಲಿ ನಡೆದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಂದು ಅನ್ನಕೊಟ್ಟವರ ಬಗ್ಗೆಯೇ ಮಾತನಾಡುತ್ತಾರೆ. ಅಂತವರಿಗೆ ಜಿಲ್ಲೆಯ ಜನತೆ ಬುದ್ಧಿ ಕಲಿಸಬೇಕು ಎಂದರು.ದೇಶ ಕಾಯೋಕೆ ಮೋದಿ, ಕಾವೇರಿ ಕಾಯೋಕೆ ಎಚ್.ಡಿ.ಕುಮಾರಸ್ವಾಮಿಗೆ ಜಿಲ್ಲೆಯ ಜನರು ಆಶೀರ್ವಾದ ಮಾಡಬೇಕು. ಕಾವೇರಿ ನೀರಿನ ಹೋರಾಟಗಾರ ನಮ್ಮ ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸುಪುತ್ರರನ್ನು ಜಿಲ್ಲೆಯ ರೈತಾಪಿ ಜನರು ಗೆಲ್ಲಿಸಬೇಕು ಎಂದು ಕೋರಿದರು.

ಕುಮಾರಣ್ಣನನ್ನು ಮಂಡ್ಯ ಜಿಲ್ಲೆ ಜನತೆ ಗೆಲ್ಲಿಸಿದರೆ ದೇಶದಲ್ಲಿ ನರೇಂದ್ರ ಮೋದಿ ಮೂರನೇ ಭಾರಿಗೆ ಪ್ರಧಾನ ಮಂತ್ರಿಯಾಗಲಿದ್ದಾರೆ. ಅವರ ಸಂಪುಟದಲ್ಲಿ ಕುಮಾರಣ್ಣ ಕೇಂದ್ರ ಕೃಷಿ ಮಂತ್ರಿಯಾಗಲಿದ್ದಾರೆ ಎಂದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ