ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ

KannadaprabhaNewsNetwork | Published : Apr 23, 2024 12:45 AM

ಸಾರಾಂಶ

ಕಾನೂನಿನ ಯಾವುದೇ ಭಯವಿಲ್ಲದೆ ಜನಸಾಮಾನ್ಯರಲ್ಲಿ ಭಯಭೀತಿ ಉಂಟುಮಾಡುವ ಪ್ರಸಂಗಗಳು ಬಹಳಷ್ಟು ನಡೆಯುತ್ತಿವೆ. ನೇಹಾ ಅವರ ತಂದೆ ಸ್ವತಃ ಆಡಳಿತ ಪಕ್ಷದ ಕಾರ್ಪೋರೇಟರ್ ಆಗಿದ್ದು, ಅಧಿಕಾರದಲ್ಲಿರುವವರ ಕಥೆಯೇ ಹೀಗಾದರೆ ಮತ್ತು ಜನಸಾಮಾನ್ಯರ ರಕ್ಷಣೆ ಹೇಗೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯನ್ನು ಖಂಡಿಸಿ ಬಿಜೆಪಿ ಮುಖಂಡರು- ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಲವ್ ಜಿಹಾದ್ ಒಳಗಾಗಲು ತಿರಸ್ಕರಿಸಿದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರನ್ನು ಫಯಾಜ್ ಎಂಬಾತ ಕತ್ತು ಸೀಳಿ ಉಗ್ರರ ರೀತಿಯಲ್ಲಿ ಹತ್ಯೆಗೈದಿರುವುದು ಅಮಾನುಷ ಕೃತ್ಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನಿನ ಯಾವುದೇ ಭಯವಿಲ್ಲದೆ ಜನಸಾಮಾನ್ಯರಲ್ಲಿ ಭಯಭೀತಿ ಉಂಟುಮಾಡುವ ಪ್ರಸಂಗಗಳು ಬಹಳಷ್ಟು ನಡೆಯುತ್ತಿವೆ. ನೇಹಾ ಅವರ ತಂದೆ ಸ್ವತಃ ಆಡಳಿತ ಪಕ್ಷದ ಕಾರ್ಪೋರೇಟರ್ ಆಗಿದ್ದು, ಅಧಿಕಾರದಲ್ಲಿರುವವರ ಕಥೆಯೇ ಹೀಗಾದರೆ ಮತ್ತು ಜನಸಾಮಾನ್ಯರ ರಕ್ಷಣೆ ಹೇಗೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ತಕ್ಷಣ ಆರೋಪಿವೇ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ. ಜೀವ ಅಮೂಲ್ಯ, ಇಂತಹ ಕೃತ್ಯ ಮಾಡಿರುವ ಆರೋಪಿಗೆ ಗಲ್ಲುಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.

ನೇಹಾ ಯುವತಿಯ ಕೊಲೆ ಹಿಂದೆ ಲವ್ ಜಿಹಾದ್ ಇದ್ದು ಕೂಡಲೇ ಕೊಲೆಗಾರನಿಗೆ ಗಲ್ಲು ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.

ಇಂತಹ ಘಟನೆಗಳಿಗೆ ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯೇ ಕಾರಣ. ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ ಹಾಡಹಗಲೇ ಹತ್ಯೆ ನಡೆದಿರುವುದು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.

ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ, ಹುಬ್ಬಳ್ಳಿ ಗಲಭೆ ಪ್ರಕರಣ, ರಾಮೇಶ್ವರ ಸ್ಫೋಟ, ದೇಶ ವಿರೋಧಿ ಘೋಷಣೆ, ಮುಸ್ಲಿಂ ಲೀಗ್ ಧ್ವಜ ಹೀಗೆ ಸಾಲು ಸಾಲು ಸಮಾಜಘಾತಕ, ದೇಶದ್ರೋಹಿ ಘಟನೆ ನಡೆದಿವೆ. ಆದರೆ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಮತಕ್ಕಾಗಿ ತುಷ್ಟೀಕರಣ ಮಾಡುತ್ತಿದೆ. ಈಗ ನಡೆದಿರುವ ಹತ್ಯೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮನ್‌ಮುಲ್ ನಿರ್ದೇಶಕಿ ರೂಪಾ, ಮುಖಂಡರಾದ ಡಾ. ಸಿದ್ದರಾಮಯ್ಯ, ಎಸ್.ಸಚ್ಚಿದಾನಂದ, ಎಚ್.ಆರ್.ಅರವಿಂದ್, ಚಂದಗಾಲು ಶಿವಣ್ಣ, ಮಂಗಳಾ, ಪುಟ್ಟಮ್ಮ, ರಮೇಶ್ ವಿಶ್ವಕರ್ಮ, ಶಿವಕುಮಾರ್‌ಆರಾಧ್ಯ, ಕೇಶವ, ಅಶೋಕ್, ಶ್ರೀಧರ್, ಸಿ.ಟಿ.ಮಂಜುನಾಥ್, ವಸಂತ, ಸುರೇಶ್, ರಾ.ಸಿ. ಸಿದ್ದರಾಜು, ನಿತ್ಯಾನಂದ, ಕೆಂಪಬೋರಯ್ಯ, ಅಶೋಕ್ ಜಯರಾಂ ಇತರರಿದ್ದರು.ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯಹುಬ್ಬಳ್ಳಿಯ ನೇಹಾ, ತುಮಕೂರಿನ ರುಕ್ಸಾನಾ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಹಿಳಾ ಮುನ್ನಡೆ ರಾಜ್ಯ ಕಾರ್ಯದರ್ಶಿ ಜಿ. ಪೂರ್ಣಿಮಾ ಒತ್ತಾಯಿಸಿದರು.

ರಾಜ್ಯದಲ್ಲಿ ನಡೆದಿರುವ ಹೆಣ್ಣು ಮಕ್ಕಳ ಹತ್ಯೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರ ತನಿಖೆ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಜಾತಿ, ಧರ್ಮದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳು ನಡೆದಿವೆ. ರೈತ, ದಲಿತ, ಕಾರ್ಮಿಕ ಮತ್ತು ಮಹಿಳಾ ವಿರೋಧಿಯಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಬಡವರನ್ನು ಶೋಷಣೆ ಮಾಡಿ ಕಾರ್ಪೋರೇಟ್ ದೊರೆಗಳಿಗೆ ಮಾರಾಟ ಮಾಡಲು ಪಣ ತೊಟ್ಟು ನಿಂತಿರುವ ಬಿಜೆಪಿ ಜೊತೆ ಜೆಡಿಎಸ್ ಸೇರಿಕೊಂಡಿದೆ.ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮುಖಂಡರಾದ ಎಂ. ಸಿದ್ದರಾಜು, ಬಿ.ಎಸ್.ಶಿಲ್ಪಾ, ನಗರಕೆರೆ ಜಗದೀಶ್, ಬಿ.ಕೃಷ್ಣ ಗೋಷ್ಠಿಯಲ್ಲಿದ್ದರು.

Share this article