ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಗೋ ಬ್ಯಾಕ್ ಸಿಎಂ ಪ್ರತಿಭಟನೆ

KannadaprabhaNewsNetwork |  
Published : Nov 07, 2024, 12:36 AM IST
10 | Kannada Prabha

ಸಾರಾಂಶ

ಮುನ್ನೆಚ್ಚೆರಿಕೆ ಕ್ರಮವಾಗಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಕೆ.ಎಸ್.ಆರ್.ಪಿ ವಾಹನ ನಿಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿ ಗೋ ಬ್ಯಾಕ್ ಸಿಎಂ ಎಂದು ಪ್ರತಿಭಟಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸುತ್ತಿದ್ದಂತೆ ಮುನ್ನೆಚ್ಚೆರಿಕೆ ಕ್ರಮವಾಗಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಕೆ.ಎಸ್.ಆರ್.ಪಿ ವಾಹನ ನಿಲ್ಲಿಸಿದರು. ಆದರೆ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬಂಧಿಸಲು ಮುಂದಾದರು.

ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್ ಅವರು ಪಕ್ಕದಲ್ಲಿ ನಿಂತಿದ್ದ ಪಕ್ಷದ ಪ್ರಚಾರ ವಾಹನವನ್ನು ಹತ್ತಿ, ಪೊಲೀಸರು ಕಾಂಗ್ರೆಸ್ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ. ನಾವು ಇಲ್ಲಿ ಯಾವುದೇ ಗಲಾಟೆ ಮಾಡುತ್ತಿಲ್ಲ. ಪ್ರತಿಭಟನೆ ಮಾಡಲು ಅವಕಾಶ ನೀಡದೇ ಬಂಧಿಸಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಖಂಡಿಸಿ, ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪೊಲೀಸರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಹೀಗಾಗಿ, ಪೊಲೀಸರು ಶಾಸಕ ಟಿ.ಎಸ್. ಶ್ರೀವತ್ಸ ಸೇರಿದಂತೆ ಇತರೆ ಮುಖಂಡರಿದ್ದ ಬಿಜೆಪಿ ವಾಹನವನ್ನೇ ಸಿಎಆರ್ ಮೈದಾನಕ್ಕೆ ಕಳುಹಿಸಿದರು. ನಂತರ ತಂಡ ತಂಡವಾಗಿ ಬಂದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಸ್ ಗಳ ಮೂಲಕ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಿ ನಂತರ ಬಿಡುಗಡೆಗೊಳಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಇದು ಎಲ್ಲರ ಹಕ್ಕು. ಆದರೆ, ನಮಗೆ ಅವಕಾಶ ನೀಡದಿರುವುದು ಖಂಡನಿಯ. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ. ಲೋಕಾಯುಕ್ತ ನಡೆಯುತ್ತಿರುವ ವಿಚಾರಣೆ ಬಗ್ಗೆ ಯಾವುದೇ ನಂಬಿಕೆ ಇಲ್ಲ.

- ಟಿ.ಎಸ್. ಶ್ರೀವತ್ಸ, ಶಾಸಕ

----

ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಸಿದ್ದರಾಮಯ್ಯ ತನಿಖೆ ಎದುರಿಸುತ್ತಿರುವುದು ದುರದೃಷ್ಟಕರ. ಇದೊಂದು ಕರಾಳ ದಿನ. ಪೊಲೀಸರು ಕಾಂಗ್ರೆಸ್ ಏಜೆಂಟ್ ಗಳಂತೆ ವರ್ತಿಸುತ್ತಿದ್ದು, ನಮ್ಮ ಹೋರಾಟ ಹತ್ತಿಕ್ಕಲಾಗುತ್ತಿದೆ.

- ಎಲ್. ನಾಗೇಂದ್ರ, ಮಾಜಿ ಶಾಸಕ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...