ಧಾರವಾಡ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಗಣತಿಯನ್ನು ಜಾತಿ- ಜಾತಿಗಳನ್ನು ಒಡೆಯಲು ಮಾಡುತ್ತಿದೆ ಎಂದು ಹೇಳಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ತಲೆ ಸರಿ ಇದೆಯಾ ಎನ್ನುವುದನ್ನು ಕೇಳಿಕೊಳ್ಳಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮವನ್ನು ಯಾರು ಒಡೆಯುತ್ತಿದ್ದಾರೆ? ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಿದ್ದು ಯಾರಿಗೆ? ಅದನ್ನು ಜೋಶಿ ಸಾಹೇಬರನ್ನೇ ಕೇಳಬೇಕು. ಧರ್ಮ ಒಡೆಯುತ್ತಿರುವುದು ಬಿಜೆಪಿಯವರು. ಹಿಂದೂಗಳಿಗೆ ಮೋಸ ಮಾಡುತ್ತಿರುವುದು ಇವರೇ. ಬಡ ಹಿಂದೂ ಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ. ಹಿಂದೂ- ಮುಸ್ಲಿಂ ಜಗಳ ಹಚ್ಚುತ್ತಾರೆ. ಇವರಿಂದ ಯಾವ ಹಿಂದೂಗಳಿಗೆ ಲಾಭವಾಗಿದೆ ಎಂಬುದರ ಬಗ್ಗೆ ಚರ್ಚೆಯಾಗಲಿ ಎಂದು ಜೋಶಿ ವಿರುದ್ಧ ಲಾಡ್ ಕಿಡಿಕಾರಿದರು.ದೇಶದಲ್ಲಿ 25 ಲಕ್ಷ ಹಿಂದೂಗಳು ದೇಶ ಬಿಟ್ಟು ವಿದೇಶಕ್ಕೆ ಹೋಗಿದ್ದಾರೆ. ಅವರೇಕೆ ದೇಶ ತೊರೆದು ಹೋಗಿದ್ದಾರೆ? ಘರ್ ವಾಪಸಿ ಎಂದು ಎಷ್ಟು ಹಿಂದೂಗಳನ್ನು ಇವರು ಮರಳಿ ಕರೆ ತಂದಿದ್ದಾರೆ? ವಿದೇಶದಿಂದ ಒಬ್ಬನೇ ಒಬ್ಬ ಹಿಂದೂ ದೇಶಕ್ಕೆ ಬಂದನಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಗಣತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಲಾಡ್, ಈ ತರಹದ ವೈಜ್ಞಾನಿಕ ಸಮೀಕ್ಷೆ ದೇಶದಲ್ಲಿ ಎಲ್ಲೂ ಆಗಿಲ್ಲ. ಎಲ್ಲ ಜಾತಿಗಳಲ್ಲಿ ಬಡವರಿದ್ದಾರೆ ಎಂಬುದು ಸತ್ಯ. ಆದ್ದರಿಂದ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಇದಾಗಿದ್ದು, ಇಲ್ಲಿ ಜಾತಿ ಒಂದು ಅಂಶ ಮಾತ್ರ. ಉಳಿದ ಅಂಶಗಳು ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ್ದಾಗಿವೆ ಎಂದರು.ಸಮೀಕ್ಷೆಯಲ್ಲಿ ಖಾತೆಗಳ ಮಾಹಿತಿ ಕೇಳುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಲಾಡ್, ಸರ್ಕಾರ ಖಾತೆ ಬಗ್ಗೆ ಮಾಹಿತಿ ಕೇಳಿದರೆ ತಪ್ಪೇನು? ಈಗ ಕೇಂದ್ರ ಸರ್ಕಾರ ಇದನ್ನೆಲ್ಲ ಕೇಳುತ್ತಿಲ್ಲವೇ? ಇದರಿಂದಾಗಿ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗಲಿದೆ. ಅದನ್ನು ಕೊಡೋರು ಕೊಡಬಹುದು, ಇಲ್ಲವಾದರೆ ಬಿಡಬಹುದು. ಇದರಿಂದ ಅನನುಕೂಲ ಏನಾಗುತ್ತೆ? ಇವರು ಸ್ವಿಸ್ ಬ್ಯಾಂಕಿನಿಂದ ಹಣ ತರುತ್ತೇವೆ ಅಂದಿದ್ದರಲ್ಲ. ಅಲ್ಲಿಂದ ಎಷ್ಟು ಹಣವನ್ನು ಮರಳಿ ತಂದಿದ್ದಾರೆ? ಸಮೀಕ್ಷೆ ಬಗ್ಗೆ ಈ ರೀತಿಯ ಪ್ರಶ್ನೆ ಮಾಡುವ ಬಿಜೆಪಿ ಮುಖಂಡರಿಗೆ ನಾಚಿಕೆ ಇದೆಯಾ ಎಂದು ಕಿಡಿಕಾರಿದರು.
ಧಾರವಾಡ- ಬೆಳಗಾವಿ ನೇರ ರೈಲ್ವೆ ಮಾರ್ಗ ವಿಳಂಬ ನಿಜ: ಲಾಡ್ಧಾರವಾಡ: ಧಾರವಾಡ- ಬೆಳಗಾವಿ ನೇರ ರೈಲ್ವೆ ಮಾರ್ಗದ ಭೂಸ್ವಾಧೀನ ವಿಳಂಬ ಆಗುತ್ತಿರುವುದಕ್ಕೆ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದು ನಿಜ. ಈ ವಿಷಯದಲ್ಲಿ ರಾಜ್ಯ ಸರ್ಕಾರ ರೈತರನ್ನು ಬಿಟ್ಟು ಕೊಡುವ ಪ್ರಶ್ನೆ ಇಲ್ಲ ಎಂದು ಕಾರ್ಮಿಕ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೂಸ್ವಾಧೀನದ ಬಗ್ಗೆ ಪ್ರಯತ್ನ ಮಾಡಿದ್ದೇವೆ. ಇಡೀ ಬೇಲೂರು ಕೈಗಾರಿಕಾ ಪ್ರದೇಶಕ್ಕೆ ಭೂಮಿ ಕೊಟ್ಟವರು ಮುಮ್ಮಿಗಟ್ಟಿ ಗ್ರಾಮಸ್ಥರು. ಇದೀಗ ಅವರೂರಿನಲ್ಲಿ ಹಾಯ್ದು ಹೋಗುತ್ತಿರುವ ಈ ರೈಲು ಮಾರ್ಗಕ್ಕಾಗಿ ಸಣ್ಣದೊಂದು ಬದಲಾವಣೆ ಕೇಳುತ್ತಿದ್ದಾರೆ. ಅದನ್ನು ರೈಲ್ವೆ ಇಲಾಖೆ ಒಪ್ಪುತ್ತಿಲ್ಲ. ಒಂದನೇ ಮಾರ್ಗ ಬದಲಾವಣೆಗೆ ರೈಲ್ವೆ ಒಪ್ಪಿಕೊಂಡಿತು. ಆದರೆ, ಅದಕ್ಕೆ ಗ್ರಾಮಸ್ಥರು ಒಪ್ಪಲಿಲ್ಲ. ಎರಡು, ಮೂರನೇ ಮಾರ್ಗ ಬದಲಾವಣೆಗೆ ಸಂಧಾನವಾಗಿತ್ತು. ಆದರೆ, ಅದಕ್ಕೆ ರೈಲ್ವೆ ಇಲಾಖೆಯವರು ಒಪ್ಪಲಿಲ್ಲ. ಸಣ್ಣ ಬದಲಾವಣೆ ಮಾಡಲೂ ರೈಲ್ವೆ ಇಲಾಖೆಯವರು ಒಪ್ಪಿಕೊಳ್ಳುತ್ತಿಲ್ಲ. ಹೀಗಾದರೆ ನಾವು ರೈತರ ಹಾಗೂ ಗ್ರಾಮಸ್ಥರ ವಿರುದ್ಧ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಲಾಡ್ ಪ್ರಶ್ನಿಸಿದರು.ಈ ಬಗ್ಗೆ ರೈಲ್ವೆ ಇಲಾಖೆಯು ಸಾರ್ವಜನಿಕವಾಗಿ ಚರ್ಚೆ ಮಾಡಬೇಕಲ್ಲವೇ? ಸಾರ್ವಜನಿಕವಾಗಿ ಯೋಜನೆ ಏನು ಎಂಬುದು ಗೊತ್ತಾಗಬೇಕಲ್ಲವೇ? ಆಗ ರೈತರು ಇದನ್ನು ಒಪ್ಪಿಕೊಳ್ಳಬಹುದು ಎಂದು ಲಾಡ್ ಹೇಳಿದರು.
ಬೆಳೆ ನಷ್ಟ ಪರಿಹಾರ ವಿಚಾರವಾಗಿ ಮಾತನಾಡಿದ ಲಾಡ್, ಬೆಳೆಹಾನಿ ಸಮೀಕ್ಷೆಯಲ್ಲಿ ಧಾರವಾಡ ಮೊದಲ ಸ್ಥಾನದಲ್ಲಿದೆ. ಸರ್ವೆ ನಂಬರ್ ಪ್ರಕಾರ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಸರ್ಕಾರ ನಿಗದಿಪಡಿಸಿದ ದರದಂತೆ ಪರಿಹಾರ ನೀಡಲಾಗುವುದು. ಹತ್ತು ದಿನದೊಳಗೆ ಸರ್ಕಾರ ಪರಿಹಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು.