ಕನ್ನಡಪ್ರಭ ವಾರ್ತೆ ಗೋಕಾಕ
ಕಾರ್ಖಾನೆಯ ಸಭಾಗೃಹದಲ್ಲಿ ಶನಿವಾರ ನಡೆದ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಗೋಕಾಕ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ಘೋಷಿಸಿದರು. ಇಲ್ಲಿಯವರೆಗೆ ಅಧ್ಯಕ್ಷರಾಗಿದ್ದ ಅಶೋಕ ಪಾಟೀಲ ಮತ್ತು ಉಪಾಧ್ಯಕ್ಷರಾಗಿದ್ದ ರಾಮಣ್ಣಾ ಮಹಾರೆಡ್ಡಿಯವರ ನಿಧನದಿಂದ ಎರಡೂ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಂಬಳಿ ಮತ್ತು ಕಬ್ಬೂರ ಅಧಿಕಾರವಧಿಯು ಮುಂದಿನ 2028ರವರೆಗೆ ಇರಲಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಸಹೋದರರ ಮಾರ್ಗದರ್ಶನದಲ್ಲಿ ಕಾರ್ಖಾನೆ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ರೈತರ ಸಹಾಯ- ಸಹಕಾರ ಅವಶ್ಯವಾಗಿದೆ ಎಂದು ನೂತನ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ ತಿಳಿಸಿದರು. ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರು ಕಂಬಳಿ ಮತ್ತು ಕಬ್ಬೂರನ್ನು ಅಭಿನಂದಿಸಿ ಮಾತನಾಡಿದರು.ಕಾರ್ಖಾನೆಗೆ ಹೊಸ ಅಧ್ಯಕ್ಷ- ಉಪಾಧ್ಯಕ್ಷರಾಗುತ್ತಿದ್ದಂತೆಯೇ ಶಾಸಕರ ಗೃಹ ಕಚೇರಿಗೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಮತ್ತು ಕಾರ್ಖಾನೆ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿಯನ್ನು ಸತ್ಕರಿಸಿ, ಗೌರವಿಸಿದರು.
ಹಿಂದಿನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅಶೋಕ ಪಾಟೀಲ ಮತ್ತು ರಾಮಣ್ಣಾ ಮಹಾರೆಡ್ಡಿಯವರ ನಿಧನದಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ದಿವಂಗತರ ಮಕ್ಕಳನ್ನು ಕಾರ್ಖಾನೆಯ ಹೊಸ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮನ್ನು ಮುಂದಿನ ನವೆಂಬರ್ ತಿಂಗಳಿನ ಮೊದಲ ವಾರದಲ್ಲಿ ಆರಂಭಿಸಲಾಗುವುದು. ರೈತರು ನಮ್ಮ ಕಾರ್ಖಾನೆಗೆ ಕಬ್ಬನ್ನು ಪೂರೈಕೆ ಮಾಡಿ ನಮ್ಮೊಂದಿಗೆ ಕೈ ಜೋಡಿಸಬೇಕು. ಪ್ರಸಕ್ತ ಹಂಗಾಮಿನಲ್ಲಿ 3 ರಿಂದ 5 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ರೈತರ ಅಭಿವೃದ್ಧಿಯೇ ನಮಗೆ ಮುಖ್ಯವಾಗಿದೆ. ಬಾಲಚಂದ್ರ ಜಾರಕಿಹೊಳಿ, ಶಾಸಕ, ಬೆಮುಲ್ ಅಧ್ಯಕ್ಷ