ಕನ್ನಡಪ್ರಭ ವಾರ್ತೆ ಬೆಂಗಳೂರು
ಬಳ್ಳಾರಿಯಲ್ಲಿ ಮಾತನಾಡಿದ ಪರಿಷತ್ ಸದಸ್ಯ ರವಿಕುಮಾರ್, ರಾಹುಲ್ ಅವರು ಭಾರತ್ ಜೋಡೋ ಎಂದರೆ, ಸುರೇಶ್ ಅವರು ಭಾರತ್ ತೋಡೋ ಎನ್ನುತ್ತಿದ್ದಾರೆ. ಇದಕ್ಕೆ ರಾಹುಲ್ ಗಾಂಧಿಯವರೇ ಉತ್ತರ ನೀಡಬೇಕು ಎಂದರು. ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, 1947ರಲ್ಲಿ ದೇಶ ವಿಭಜನೆಗೆ ಅನುಮತಿ ನೀಡಿ ಸಹಿ ಹಾಕಿದವರೇ ಕಾಂಗ್ರೆಸ್ ನಾಯಕರು. ದೇಶ ಒಡೆಯುವ ಮನಸ್ಥಿತಿ ಅವರದು ಎಂದು ಕಿಡಿ ಕಾರಿದರು. ಕೋಲಾರದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ, ಬ್ರಿಟಿಷರ ಜೊತೆ ಸೇರಿಕೊಂಡು ದೇಶ ವಿಭಜನೆ ಮಾಡಿದ ನೆಹರು ಸಂತತಿಗೆ ಸುರೇಶ್ ಸೇರಿದ್ದಾರೆ. ಅವರಿಗೆ ಮತಿಭ್ರಮಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸಂಸದರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಒಬ್ಬ ಜನಪ್ರತಿನಿಧಿಯಾಗಿ ಸುರೇಶ್ ಅವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎ.ರಾಮದಾಸ್, ಎಐಸಿಸಿ, ಕೆಪಿಸಿಸಿ ದುರ್ಬಲವಾಗಿವೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ರಾಯಚೂರಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ದೇಶ ಒಂದಾಗಿರುವುದು ಕಾಂಗ್ರೆಸ್ ನಾಯಕರಿಗೆ ಇಷ್ಟವಿಲ್ಲ. ಹೀಗಾಗಿ, ಬಜೆಟ್ ವಿಚಾರದಲ್ಲೂ ಉತ್ತರ ಭಾರತ, ದಕ್ಷಿಣ ಭಾರತ ಎಂದು ಇಬ್ಭಾಗ ಮಾಡುತ್ತಿದ್ದಾರೆ ಎಂದು ದೂರಿದರು.