ಹಾಲಿನ ದರ ಹೆಚ್ಚಳದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ: ಮಂಜುನಾಥ್

KannadaprabhaNewsNetwork | Published : Mar 30, 2025 3:00 AM

ಸಾರಾಂಶ

ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು 10 ಹಸುಗಳನ್ನು ಸಾಕಿ ಹಾಲು ಕರೆದು ಡೇರಿಗೆ ಹಾಕಲಿ ಆಗ ಅವರಿಗೆ ರೈತರ ಕಷ್ಟ ತಿಳಿಯುತ್ತದೆ. ರೈತರು ಹಾಗೂ ಹೈನುಗಾರಿಕೆ ನಡೆಸುತ್ತಿರುವ ಕುಟುಂಬ ವರ್ಗ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೆಎಂಎಫ್ ಈಗ ಕೊಡುತ್ತಿರುವ ಹಾಲಿನ ದರ ಯಾವುದಕ್ಕೂ ಸಾಲುತ್ತಿಲ್ಲ. ಇದನ್ನರಿತು ಸರ್ಕಾರ ಕೇವಲ 4 ರು. ಮಾತ್ರ ಜಾಸ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರ ಕಷ್ಟದ ಅರಿವಿಲ್ಲದ ಬಿಜೆಪಿ ನಾಯಕರಿಗೆ ಹಾಲಿನ ದರ ಹೆಚ್ಚಳದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಮಂಡಿಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು 10 ಹಸುಗಳನ್ನು ಸಾಕಿ ಹಾಲು ಕರೆದು ಡೇರಿಗೆ ಹಾಕಲಿ ಆಗ ಅವರಿಗೆ ರೈತರ ಕಷ್ಟ ತಿಳಿಯುತ್ತದೆ ಎಂದರು.

ರೈತರು ಹಾಗೂ ಹೈನುಗಾರಿಕೆ ನಡೆಸುತ್ತಿರುವ ಕುಟುಂಬ ವರ್ಗ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೆಎಂಎಫ್ ಈಗ ಕೊಡುತ್ತಿರುವ ಹಾಲಿನ ದರ ಯಾವುದಕ್ಕೂ ಸಾಲುತ್ತಿಲ್ಲ. ಇದನ್ನರಿತು ಸರ್ಕಾರ ಕೇವಲ 4 ರು. ಮಾತ್ರ ಜಾಸ್ತಿ ಮಾಡಿದೆ ಎಂದು ತಿಳಿಸಿದ್ದಾರೆ.

ರೈತರಿಗೆ ಒಂದು ಲೀಟರಿಗೆ ಕನಿಷ್ಠ 60 ರು. ನೀಡಿದರೂ ಅದು ಕಡಿಮೆ. ಹಸುಗಳ ಮೇವು, ತಿಂಡಿಯ ಬೆಲೆ ದುಬಾರಿಯಾಗಿದೆ. ಒಂದು ಕೆಜಿ ಇಂಡಿ 60 ರು. ಆಗಿದೆ. ಒಂದು ಎಕರೆಯಲ್ಲಿ ಜೋಳದ ಮೇವು ಬೆಳೆದರೆ 25,000 ರು. ಖರ್ಚು ಬರುತ್ತದೆ. ಮೂರು ಹಸು ಸಾಕಲು ಮನೆಯಲ್ಲಿ ಇಬ್ಬರಿಗೆ ಸಂಪೂರ್ಣ ಕೆಲಸವಿದೆ. ಖರ್ಚು-ವೆಚ್ಚವನ್ನು ನೋಡಿದರೆ ರೈತರ ಶ್ರಮಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಚುನಾವಣೆ ವೇಳೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದು ಹೇಳಿ ಎಲ್ಲಾ ರಾಸಾಯನಿಕ ಗೊಬ್ಬರಗಳ ಬೆಲೆಯನ್ನು ಏರಿಕೆ ಮಾಡಿದೆ. ರೈತರು ಬೆಳೆದ ಬೆಳೆಗೆ ಯಾವುದೇ ವೈಜ್ಞಾನಿಕ ಅಥವಾ ಬೆಂಬಲ ಬೆಲೆ ಇಲ್ಲ. ಇದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಬಿಜೆಪಿ ನಾಯಕರು ಕೇವಲ ಸುಳ್ಳು ಭರವಸೆ ಕೊಟ್ಟು ಚುನಾವಣೆ ವೇಳೆ ಜನರನ್ನು ವಂಚನೆಗೊಳಿಸುವುದನ್ನು ಬಿಟ್ಟು ಅಗ್ಗದ ಪ್ರಚಾರ ಹಾಗೂ ಭಾಷಣಕ್ಕೆ ಸೀಮಿತವಾಗಿದ್ದಾರೆ ಎಂದು ಟೀಕಿಸಿದ್ದಾರೆ.

Share this article