ಬಳ್ಳಾರಿ: ಬಿಜೆಪಿಯ ಹಿರಿಯ ನಾಯಕ ಬಿ. ಶ್ರೀರಾಮುಲು ಅವರು ಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರಾದ ಶಿವಾರೆಡ್ಡಿ, ದಿವಾಕರಗೌಡ ಹಾಗೂ ಗೌಳಿ ಚಂದ್ರು ಒತ್ತಾಯಿಸಿದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ರಾಜಕೀಯ ಭವಿಷ್ಯ ಕಂಡುಕೊಂಡಿರುವ ಶ್ರೀರಾಮುಲು ಇದೀಗ ಕೂಡ್ಲಿಗಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಹಾಗಾದರೆ ಶ್ರೀರಾಮುಲು ಅವರು ಕೂಡ್ಲಿಗಿಯಿಂದ ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡಿದೆಯಾ? ಹೈಕಮಾಂಡ್ ಅನುಮತಿ ಕೊಟ್ಟಿದೆಯಾ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆ ಸೋಲಿನ ಬಳಿಕ ಶ್ರೀರಾಮುಲು ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿಲ್ಲ. ನಿಮ್ಮ ಸಮಸ್ಯೆ ಏನು ಎಂದು ಆಲಿಸಲಿಲ್ಲ. ಶೀಘ್ರದಲ್ಲಿಯೇ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ಶ್ರೀರಾಮುಲು ಅವರು ಕೂಡ್ಲಿಗಿಗೆ ಹೋದರೆ ಇಲ್ಲಿನ ಪಕ್ಷದ ಕಾರ್ಯಕರ್ತರ ಗತಿ ಏನು? ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷದ ಮುಖಂಡರನ್ನು ಗೆಲ್ಲಿಸಿಕೊಂಡು ಬರುವವರು ಯಾರು? ಸಾಯುವ ತನಕ ಗ್ರಾಮೀಣ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಕ್ಷೇತ್ರದ ಜನರ ಜೊತೆಗಿದ್ದು ಜನಪರ ಹೋರಾಟ ರೂಪಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದ ಶ್ರೀರಾಮುಲು ಅವರು, ಈಗೇಕೆ ಕೂಡ್ಲಿಗಿ ಕಡೆ ಮುಖ ಮಾಡಿದ್ದಾರೆ ಎಂದು ಕೇಳಿದರು.ಎರಡೂ ಕಡೆ ಬೇಕಾದರೆ ಸ್ಪರ್ಧಿಸಲಿ
ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡರಾದ ಭೀಮರೆಡ್ಡಿ, ಹೊನ್ನಾರೆಡ್ಡಿ, ಶ್ರೀನಿವಾಸ್, ಮಲ್ಲೇಶ್, ಲಿಂಗನಗೌಡ, ಸಂಜುನಾಯಕ್ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.