ಉಪಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ತಕ್ಕಪಾಠ: ದೊಡ್ಡಬಸನಗೌಡ ಬಯ್ಯಾಪೂರ

KannadaprabhaNewsNetwork | Published : Nov 24, 2024 1:51 AM

ಸಾರಾಂಶ

ರಾಜ್ಯ ಬಿಜೆಪಿಗೆ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೂ ತಕ್ಕಪಾಠ ಕಲಿಸಿದ್ದು, ಬಿಜೆಪಿ ನಾಯಕರು ಕುತಂತ್ರ ರಾಜಕಾರಣ ಮಾಡುವುದನ್ನು ಬಿಡಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ರಾಜ್ಯ ಬಿಜೆಪಿಗೆ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೂ ತಕ್ಕಪಾಠ ಕಲಿಸಿದ್ದು, ಬಿಜೆಪಿ ನಾಯಕರು ಕುತಂತ್ರ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸನಗೌಡ ಬಯ್ಯಾಪೂರ ಹೇಳಿದರು.

ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆ ಬಸವೇಶ್ವರ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು.ಉಪ ಚುನಾವಣೆಗಳ ಫಲಿತಾಂಶದ ಮೂಲಕ ಜನತೆಯು ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರ ಐದು ವರ್ಷ ಪೂರೈಸುವ ಗ್ಯಾರಂಟಿಗೆ ಬಲ ತುಂಬಿದ್ದಾರೆ ಎಂದರು.

ಇದರಿಂದ ರಾಜ್ಯದ ಬಿಜೆಪಿ ನಾಯಕರು ಪಾಠವನ್ನು ಕಲಿತು ಕುತಂತ್ರ ರಾಜಕಾರಣ ಮಾಡಿ ಜನಾದೇಶದ ಸರ್ಕಾರವನ್ನು ಕೆಡವುವ ಪ್ರಯತ್ನವನ್ನು ಬಿಟ್ಟು ಸಮರ್ಥವಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ಬಿಜೆಪಿಯ ಈ ಸೋಲು ಮೂವರು ಮಾಜಿ ಮುಖ್ಯಮಂತ್ರಿಗಳ ಸೋಲು ಎಂದರೆ ತಪ್ಪಾಗಲಾರದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಲಿನ ನೈತಿಕ ಹೊಣೆ ಹೊತ್ತುಕೊಂಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಬಿಜೆಪಿಯವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮುಡಾ ಹಗರಣ, ಜಮೀರ್ ಕುರಿತು ಇಲ್ಲ ಸಲ್ಲದ ಹೇಳಿಕೆ ಸೇರಿದಂತೆ ಅನೇಕ ತರಹದ ಕಾರ್ಯ ಕುತಂತ್ರ ಮಾಡಿದರೂ ಸಹಿತ ಮತದಾರರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ಮೇಲೆ ನಂಬಿಕೆ ಇಟ್ಟು ತೀರ್ಪು ನೀಡಿದ್ದಾರೆ ಎಂದರು.

ಇದೇ ವೇಳೆ ಮುಖಂಡರಾದ ಉಮೇಶ ಮಂಗಳೂರು, ಶುಖರಾಜ ತಾಳಕೇರಿ ಮಾತನಾಡಿದರು.

ಮುರಡಿ ಭಿಮಜ್ಜನವರ ವೃತ್ತದಿಂದ ಆರಂಭವಾದ ಬೈಕ್ ರ್‍ಯಾಲಿ ಬಸವೇಶ್ವರ ವೃತ್ತದವರೆಗೆ ಆಗಮಿಸಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.

ಈ ಸಂದರ್ಭ ಮುಖಂಡರಾದ ತಾಜುದ್ದಿನ್ ದಳಪತಿ, ಲಾಡ್ಲೆಮಶಾಕ್ ದೋಟಿಹಾಳ, ವಿಜಯ ನಾಯಕ, ಖಾಜಾ ಮೈನುದ್ದಿನ್ ಮುಲ್ಲಾ, ಮಹೇಶ ಕೋಳೂರು, ಶೌಖತ್ ಕಾಯಿಗಡ್ಡಿ, ಮಂಜುನಾಥ ಕಟ್ಟಿಮನಿ, ಯಮನೂರಪ್ಪ ಸಂಗಟಿ, ಬುಡ್ನೇಸಾಬ ಕಲಾದಗಿ, ಮಹಾಂತೇಶ ಬಂಡೇರ, ಶರಣು ನಾಯಕವಾಡಿ, ಅಬ್ದುಲ್ ರಜಾಕ ಸುಳ್ಳದ, ರಮೇಶ ಚಟ್ಟೆರ, ರಾಜು ವಾಲಿಕಾರ, ಪೂಜಾರಪ್ಪ ಮದಲಗಟ್ಟಿ, ನಿಜಾಮ ಕಪಾಲಿ, ಕೃಷ್ಣಮೂರ್ತಿ ಟೆಂಗುಂಟಿ, ಕಳಕೇಶ ನಾಯಕ, ಹುಸೇನ ಕಾಯಿಗಡ್ಡಿ, ಮಂಜು ಬೆಂಗುಂಟಿ, ಮುರಳಿ ಮೇಲಿನಮನಿ, ಸದ್ದಾಂ ಅಮರಾವತಿ, ರಾಜು ಬಾವಿಕಟ್ಟಿ, ಮರಿಯಪ್ಪ, ಗವಿಸಿದ್ದನಗೌಡ ಕುದರಿ, ಮಂಜುನಾಥ ಕಬ್ಬಿ, ವೀರೇಶ ಬಿ.ಟಿ. ಸೇರಿದಂತೆ ಅನೇಕರು ಇದ್ದರು.

Share this article