ಮಹಿಳಾ ಮೀಸಲಾತಿ ವಿಧೇಯಕಕ್ಕೆ ವಿರೋಧ ಆರೋಪ । ಮುಂದೆ ಮಹಿಳೆಯರಿಂದ ಕಾಂಗ್ರೆಸ್‌ನಿಂದ ತಕ್ಕ ಉತ್ತರ: ಶಾಸಕ
ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ನಿಲುವಿಗೆ ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಜನಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ತರಲಾಗಿರುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವುದು ದುರದೃಷ್ಟಕರ ಬೆಳವಣಿಗೆ. ಮಹಿಳಾ ಸಬಲೀಕರಣಕ್ಕೆ ಇದು ಮಹತ್ವದ ಹೆಜ್ಜೆಯಾಗಿದ್ದು, ಇದನ್ನು ವಿರೋಧಿಸುವುದು ಮಹಿಳೆಯರ ಹಕ್ಕುಗಳಿಗೆ ಧಕ್ಕೆ ತರುವಂತಾಗಿದೆ ಎಂದು ಅಭಿಪ್ರಾಯಪಟ್ಟರು.ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದು ಕೇವಲ ತೋರಿಕೆಗಾಗಿ ಎಂಬುದು ನಾರಿ ಶಕ್ತಿ ವಂದನ್ ಅಧಿನಿಯಮದ ವಿರುದ್ಧ ಅವರು ತೋರಿದ ನಿಲುವಿನಿಂದ ಸಾಬೀತಾಗಿದೆ ಎಂದರು.ದಶಕಗಳ ಕಾಲ ಮಹಿಳೆಯರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು, ಇಂದು ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ನೀಡುವ ಐತಿಹಾಸಿಕ ಮಸೂದೆಯನ್ನು ಬೆಂಬಲಿಸುವ ಬದಲು ಅದರ ವಿರುದ್ಧ ನಿಂತಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಮಹಿಳೆಯರಿಗೆ ನಿಜವಾದ ಅಧಿಕಾರ ಸಿಗುವುದನ್ನು ಸಹಿಸದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಈ ಧೋರಣೆಯು ಅವರ ಸಂಕುಚಿತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಬಿಜೆಪಿ ಜಿಲ್ಲಾ ಮುಖಂಡೆ ನೇತ್ರ ಸುರೇಶ್ ಮಾತನಾಡಿ, ಸ್ತ್ರೀಶಕ್ತಿಯ ಗೌರವಕ್ಕಾಗಿ ತಂದ ಈ ಅಧಿನಿಯಮಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಮತ್ತು ವಿಪಕ್ಷಗಳ ಈ ನಡೆ ಕೋಟ್ಯಂತರ ಮಹಿಳೆಯರ ಕನಸಿಗೆ ಮಾಡಿದ ದ್ರೋಹವಾಗಿದೆ. ನಾರಿ ಶಕ್ತಿಯ ಪ್ರಗತಿಗೆ ಕಂಟಕವಾಗಿರುವ ಇಂತಹ ಮಹಿಳಾ ವಿರೋಧಿ ರಾಜಕಾರಣಕ್ಕೆ ದೇಶದ ಮಹಿಳೆಯರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದು ಖಚಿತ ಎಂದರು.