ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ವಿರುದ್ಧದ ಹೋರಾಟ ತೀವ್ರ : ಮೈಸೂರಿಗೆ ಬಿಜೆಪಿ ನಡಿಗೆ ಪಕ್ಕಾ

KannadaprabhaNewsNetwork |  
Published : Jul 26, 2024, 01:40 AM ISTUpdated : Jul 26, 2024, 05:56 AM IST
ಬಿಜೆಪಿ | Kannada Prabha

ಸಾರಾಂಶ

ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ವಿರುದ್ಧದ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದು, ಮುಂದಿನ ವಾರದಲ್ಲಿ ಪಾದಯಾತ್ರೆ ಆರಂಭವಾಗುವ ಸಾಧ್ಯತೆಯಿದೆ.

  ಬೆಂಗಳೂರು : ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ವಿರುದ್ಧದ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದು, ಮುಂದಿನ ವಾರದಲ್ಲಿ ಪಾದಯಾತ್ರೆ ಆರಂಭವಾಗುವ ಸಾಧ್ಯತೆಯಿದೆ.

ಈ ಬಗ್ಗೆ ಭಾನುವಾರ ಉಭಯ ಪಕ್ಷಗಳ ನಾಯಕರ ಸಮನ್ವಯ ಸಭೆ ನಡೆಯಲಿದ್ದು, ಯಾತ್ರೆಯ ರೂಪುರೇಷೆ ಅಂತಿಮಗೊಳಿಸಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಬಹುತೇಕ ಮುಂದಿನ ಬುಧವಾರ ಅಥವಾ ಗುರುವಾರ (ಜು.31 ಅಥವಾ ಆ.1) ಯಾತ್ರೆಗೆ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಒಟ್ಟು ಆರರಿಂದ ಎಂಟು ದಿನಗಳ ಕಾಲ ಯಾತ್ರೆ ನಡೆಸುವ ಚಿಂತನೆ ನಡೆದಿದ್ದು, ಪ್ರತಿದಿನ ಎರಡು ಹಂತದಲ್ಲಿ ಪಾದಯಾತ್ರೆ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ. ಒಂದು ದಿನಕ್ಕೆ ಎಷ್ಟು ಕಿ.ಮೀ. ಸಂಚರಿಸಬೇಕು ಮತ್ತು ಎಲ್ಲೆಲ್ಲಿ ಸಭೆ, ಸಮಾರಂಭಗಳನ್ನು ನಡೆಸಬೇಕು ಎಂಬುದನ್ನು ಅಂತಿಮಗೊಳಿಸುವುದು ಬಾಕಿ ಇದೆ.

ಬೆಂಗಳೂರಿನಿಂದ ಆರಂಭವಾಗುವ ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡುವ ನಿರೀಕ್ಷೆಯಿದೆ. ಯಾತ್ರೆಯ ಕೊನೆಯ ದಿನದಂದು ಮೈಸೂರಿನಲ್ಲಿ ಬೃಹತ್‌ ಸಮಾರೋಪ ಸಮಾರಂಭ ನಡೆಸಲಾಗುವುದು. ಈ ಸಮಾರಂಭಕ್ಕೆ ಬಿಜೆಪಿಯ ಕೇಂದ್ರದ ವರಿಷ್ಠರು ಆಗಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಸದನ ಮುಂದೂಡಿಕೆಯಾಗಿದ್ದ ವೇಳೆ ಬಿಜೆಪಿ ಮುಖಂಡರು ಪಾದಯಾತ್ರೆಯ ನೀಲನಕ್ಷೆಯನ್ನು ಅಂದಾಜಿಸಿದ್ದಾರೆ. ಪ್ರಮುಖ ನಗರಗಳಲ್ಲಿ ಮುಖ್ಯರಸ್ತೆಯಲ್ಲಿ ಹಾದು ಹೋಗದೆ ಊರೊಳಗೆ ತೆರಳಿ ಅಲ್ಲಿನ ಜನತೆಗೆ ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ. ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ವೇಳೆ ಇದರ ಲಾಭ ಪಡೆದುಕೊಳ್ಳುವ ಆಲೋಚನೆಯೂ ಬಿಜೆಪಿಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ಚಿನ ಜನ ಸೇರಿಸಿ ಬಲ ಪ್ರದರ್ಶನ ತೋರುವ ಇರಾದೆ ಇದೆ ಎನ್ನಲಾಗಿದೆ.

ಪ್ರತಿ ದಿನ ಎರಡು ಬಾರಿ ಪಾದಯಾತ್ರೆ ನಡೆಸುವ ಉದ್ದೇಶ ಹೊಂದಲಾಗಿದೆ. ಪ್ರತಿ ಪಾದಯಾತ್ರೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಜನ ಸೇರಿಸುವ ಚಿಂತನೆ ನಡೆದಿದೆ. ಜನ ಸೇರಿಸುವ ಹೊಣೆಯನ್ನು ಆಯಾ ಕ್ಷೇತ್ರಗಳ ಮುಖಂಡರಿಗೆ ಜವಾಬ್ದಾರಿ ನೀಡುವ ಬಗ್ಗೆ ಆಲೋಚನೆ ನಡೆದಿದೆ. ಜೆಡಿಎಸ್‌-ಬಿಜೆಪಿ ಮುಖಂಡರೆಲ್ಲಾ ಸೇರಿ ಚರ್ಚೆ ನಡೆಸಿದ ಬಳಿಕ ಪಾದಯಾತ್ರೆಯ ಒಟ್ಟಾರೆ ಚಿತ್ರಣ ಗೊತ್ತಾಗಲಿದೆ ಎನ್ನಲಾಗಿದೆ.

ಕಾಂಗ್ರೆಸ್‌ನಿಂದ ಟಕ್ಕರ್‌: ಮೈಸೂರಿಂದ ಬೆಂಗ್ಳೂರಿಗೆ ಪಾದಯಾತ್ರೆ ಘೋಷಣೆ!

ಮೈಸೂರು: ಮುಡಾ ಹಗರಣ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜು.29ರಂದು ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋಗೆ ಪ್ರತಿಯಾಗಿ ಕಾಂಗ್ರೆಸ್‌ ಬೆಂಗಳೂರು ಚಲೋ ಹಮ್ಮಿಕೊಳ್ಳುವ ಮೂಲಕ ಟಕ್ಕರ್ ನೀಡಲು ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ 20 ಹಗರಣಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ತೇಜೋವಧೆ ಮಾಡುವುದನ್ನು ಖಂಡಿಸಿ ಬೆಂಗಳೂರು ಚಲೋ ಆಯೋಜಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ