ರಸ್ತೆ ಗುಂಡಿ ದುರಸ್ತಿಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ

KannadaprabhaNewsNetwork |  
Published : Aug 23, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರು (ಆಲ್ದೂರು)ಬಿಜೆಪಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ಹೋಬಳಿಗಳ ರಸ್ತೆಗಳ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆ ಶನಿವಾರ ಆಲ್ದೂರು ಮಂಡಲ ಬಿಜೆಪಿ ಘಟಕದ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ‌ ಆಕ್ರೋಶ ವ್ಯಕ್ತಪಡಿಸಿದರು.

- ಶಾಶ್ವತ ಪರಿಹಾರಕ್ಕೆ ಒತ್ತಾಯ । ಆಲ್ದೂರು ಮಂಡಲದಿಂದ ಚಿಕ್ಕಮಗಳೂರು ಡಿಸಿ ಕಚೇರಿವರೆಗೆ ಯಾತ್ರೆ ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು (ಆಲ್ದೂರು)

ಬಿಜೆಪಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ಹೋಬಳಿಗಳ ರಸ್ತೆಗಳ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆ ಶನಿವಾರ ಆಲ್ದೂರು ಮಂಡಲ ಬಿಜೆಪಿ ಘಟಕದ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ‌ ಆಕ್ರೋಶ ವ್ಯಕ್ತಪಡಿಸಿದರು.

ಆಲ್ದೂರಿನಿಂದ‌ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಸುಮಾರು 18 ಕಿಮೀ ಪಾದಯಾತ್ರೆ ನಡೆಸಿ‌ ಮೂಡಿಗೆರೆ ಶಾಸಕಿ‌ ನಯನಾ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಧಿಕ್ಕಾರ ಕೂಗಿದರು. ಆಲ್ದೂರು ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಿಂಧು ಕುಮಾರ್ ಐದಳ್ಳಿ ನೇತೃತ್ವದಲ್ಲಿ ಆಲ್ದೂರಿನಿಂದ ಚಿಕ್ಕಮಗಳೂರು ವರೆಗೆ ಕಾಲ್ನಡಿಗೆ ನಡೆಸಿದರು.

ಅಭಿವೃದ್ಧಿಗೆ ಒತ್ತು ನೀಡದೆ ಬಣ ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಈ ಬಾರಿ ಮಳೆ ಇಲ್ಲ. ಮಳೆ ನಿರಂತರ ಸುರಿದಿದ್ದರೆ ರಸ್ತೆಗಳಲ್ಲಿ ಕಾಣುತ್ತಿರುವ ಅಲ್ಪ ಸ್ವಲ್ಪ ಡಾಂಬರು ಉಳಿಯುತ್ತಿರಲಿಲ್ಲ. ರಸ್ತೆ ಗಳು ಕೆರೆಕಟ್ಟೆಗಳಾಗಿ ಪರಿವರ್ತನೆಯಾಗುತ್ತಿತ್ತು. ಇಂತಹ ರಸ್ತೆ ದುರಸ್ತಿಗೆ ಇಂತಿಷ್ಟು ದಿನಗಳ ಗಡುವು ನೀಡುತ್ತಿದ್ದು ಕ್ಷೇತ್ರದ ಶಾಸಕಿ ನಯನ ಮೋಟಮ್ಮ ರಸ್ತೆ ಅಭಿವೃದ್ಧಿಗೆ ಅವಶ್ಯ ಅನುದಾನ ತಂದು ದುರಸ್ತಿಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

ಆಲ್ದೂರು ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಿಂಧು ಕುಮಾರ್ ಐದಳ್ಳಿ ಮಾತನಾಡಿ ಮಂಡಲ ವ್ಯಾಪ್ತಿಯ ರಸ್ತೆ ಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡುವಂತಿದಿದ್ದರೆ, ಯಾವುದಕ್ಕೂ ದೊರೆಯುತ್ತಿರಲಿಲ್ಲ. ಶಾಲಾ ಕಾಲೇಜು, ಆಸ್ಪತ್ರೆ ಗಳ ಮುಂಭಾಗದ ರಸ್ತೆಗಳು ದುಸ್ತರವಾಗಿದ್ದು, ಜನರು ಹೈರಾಣಾಗಿದ್ದಾರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಇದೇ ಮಾರ್ಗದಲ್ಲಿ ಸಂಚರಿಸುವ ಕಾಂಗ್ರೆಸ್ ಮುಖಂಡರಿಗೆ ತಿಳಿದಿಲ್ಲವೇ, ಜನರಿಗಾಗಿ ಬಿಜೆಪಿ ಮಂಡಲ ಯುವ ಮೋರ್ಚದಿಂದ ಪಾದಯಾತ್ರೆ ಆಯೋಜಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ ಜಿಲ್ಲೆಯ ಶೃಂಗೇರಿ ಇನ್ನಿತರ ಕಡೆಗಳಲ್ಲಿ ರಸ್ತೆಳ ಕಾಮಗಾರಿಗಳು ನಡೆದಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಮಾತ್ರ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜನರ ಸಮಸ್ಯೆಗೆ ಪಾದಯಾತ್ರೆ ಆಯೋಜಿಸಿದ ಕೂಡಲೇ ಕ್ಷೇತ್ರ ದಲ್ಲಿ ಮಾಡಿದ ಕಾಮಗಾರಿಗಳ ಪಟ್ಟಿ ನಮ್ಮ ಬ್ಯಾನರ್‌ಗಳ ಪಕ್ಕದಲ್ಲಿ ಹಾಕಿಸಿದ್ದಾರೆ, ಬಳಿಕ ಜೆಸಿಬಿ ಇನ್ನಿತರ ರಸ್ತೆ ಯಂತ್ರ ಗಳನ್ನು ಹರಿಸಿ ಈಗ ಕೆಲಸ ಆರಂಭಿಸುತ್ತಿದ್ದಾರೆ. ಈ ರೀತಿ ಕಣ್ಣೊರೆಸುವ ತಂತ್ರ ಮಾಡಿ ಜನರನ್ನು ಯಾಮಾರಿಸುವ ಯತ್ನಕ್ಕೆ ಶಾಸಕರು ಮುಂದಾಗಿದ್ದಾರೆ. ಈ ರಸ್ತೆಯ ಮೂಲಕವೇ ಶೃಂಗೇರಿ ಜಯಪುರ ಕೊಪ್ಪ ಹೊರನಾಡು ಸಾಕಷ್ಟು ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೆ ಹೊರದೇಶ ಹೊರ ಜಿಲ್ಲೆ ಗಳಿಂದ ಪ್ರವಾಸಿಗರು ಪ್ರಯಾಣಿಕರು ಸಂಚರಿಸುತ್ತಾರೆ ಮುಖ್ಯ ರಸ್ತೆಗಳ ಪರಿಸ್ಥಿತಿ ಇದ್ದರೆ ಇನ್ನು ಗ್ರಾಮೀಣ ಪ್ರದೇಶಗಳ ಸ್ಥಿತಿ ಊಹಿಸಲು ಸಾಧ್ಯವೇ ಎಂದು ಟೀಕಿಸಿದರು.

ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ಮೂಡಿಗೆರೆ ಕ್ಷೇತ್ರದಲ್ಲಿ ಗುಂಡಿಗಳಲ್ಲಿ ರಸ್ತೆ ಹುಡುಕುವ ದುಸ್ಥಿತಿ ಎಂದರು.

ಯುವ ಮುಖಂಡ ಶಶಿ ಹಂಗರವಳ್ಳಿ‌ ಮಾತನಾಡಿ, ಜನರಿಗೆ ಶಕ್ತಿ ಯೋಜನೆ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರ ಗುಂಡಿ ಭಾಗ್ಯ ಯೋಜನೆ ಮೂಲಕ ಪಯಣಿಸಿ ಆಸ್ಪತ್ರೆ ಸೇರುವ ಅತ್ಯುತ್ತಮ ಭಾಗ್ಯ ಒದಗಿಸಿದ್ದಾರೆ ಜನರ ಭವಣೆ ಸಂಕಷ್ಟಕ್ಕೆ ಯುವ ಮೋರ್ಚಾ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಅಂಬೇಡ್ಕರ್ ಪುತ್ಥಳಿ ಮತ್ತು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಜ್ಯ ಮತ್ತು ಶಾಸಕಿ ನಯನ ವಿರುದ್ಧ ಘೋಷಣೆ ಹೋಗಿ ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹೆಡದಾಳು ಸಂಪತ್, ಜಿಲ್ಲಾ ಉಪಾಧ್ಯಕ್ಷ ರಾದ ಕವೀಶ್ ಎಚ್ಎಸ್ ,ವೀಣಾ ಶೆಟ್ಟಿ,ದಿನೇಶ್ ಮುಗುಳುವಳ್ಳಿ, ಕಾರ್ಯದರ್ಶಿ ಚಂಪಾ ಜಗದೀಶ್,ಕುರುವಂಗಿ ವೆಂಕಟೇಶ್, ಕೃಷ್ಣಮೂರ್ತಿ, ಚಮೀನ್,ವಿನೋದ್ ಬೊಗಸೆ, ಪುಣ್ಯಪಾಲ್, ಯುವ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮನು ರಾಮ್, ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್ ಕೂದುವಳ್ಳಿ, ರವೀಂದ್ರ ಆನಿಗನ ಹಳ್ಳಿ, ಸುದರ್ಶನ್ ಬನ್ನೂರು, ನಾಗೇಶ್ ಡಿಜೆ, ಸ್ವರೂಪ್, ಸಂದೀಪ್ ಹರಿವಿನ ಗಂಡಿ,ಕೆರೆಮಕ್ಕಿ ಮಹೇಶ್, ಬೈಗೂರು ನಾಗೇಶ್, ಹೋಬಳಿ ಅಧ್ಯಕ್ಷ ನಾಗೇಶ್ ಭೂತನಕಾಡು, ಹರಿವಿನ ಗಂಡಿ, ಮಹಿಳಾ ಮೋರ್ಚಾದ ಮುಖಂಡರಾದ ಪ್ರತಿಭಾ ನವೀನ್, ಪುಷ್ಪಾರಾಜು, ಹೋಬಳಿಗಳ ಕಾರ್ಯಕರ್ತರು ಭಾಗವಹಿಸಿದ್ದರು.

-- ಬಾಕ್ಸ್---ಚಿಕ್ಕಮಗಳೂರಿನ ಅಜಾದ್ ಪಾರ್ಕ್ ಬಳಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ತಹಸೀಲ್ದಾರ್ ರೇಷ್ಮಾಶೆಟ್ಟಿಗೆ‌ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಪ ಸದಸ್ಯ ಡಾ.ಸಿ.ಟಿ.ರವಿ, ಬಿಜೆಪಿ‌ ಹೋರಾಟದ ಮೂಲಕ ಬೆಳೆದ ಪಕ್ಷ. ಆ ಮೂಲಕವೇ ಜನರ ವಿಶ್ವಾಸ ಗೆದ್ದ ಪಕ್ಷವಾಗಿದೆ. ಬಿಜೆಪಿ ಅವಧಿಯಲ್ಲಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಪ್ರಮಾಣದ ಅನುದಾನ ತರಲು ಸ್ಪರ್ಧೆ ಮಾಡಲಾಗುತ್ತಿತ್ತು. ಈ ಮೂಲಕ ಅಭಿವೃದ್ಧಿ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಶಾಸಕರಲ್ಲಿ ಭ್ರಷ್ಟಾಚಾರ ಸ್ಪರ್ಧೆ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ಶಾಸಕರಿಗೆ ನಾಚಿಕೆ ಆಗಬೇಕು. ಗುಂಡಿಯಲ್ಲಿ ರಸ್ತೆ ಹುಡುಕಬೇಕಾದ ಸ್ಥಿತಿ ಇದೆ. ಕಾಂಗ್ರೆಸ್ ಶಾಸಕರು ಜನರ ವಿಶ್ವಾಸ ಕಳೆದು ಕೊಂಡಿದ್ದಾರೆ ಎಂದರು.

ಕಳೆದ‌ 5 ತಿಂಗಳಿನಿಂದ ಗೃಹ ಲಕ್ಷ್ಮಿ ಹಣ ಬಂದಿಲ್ಲ. ಹಣ ಹಾಕಬೇಕಾದರೆ, ಜಿಪಂ, ತಾಪಂ‌ ಸೇರಿದಂತೆ ಯಾವುದಾದರೂ ಚುನಾವಣೆ ಬರಬೇಕಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಆರ್ ಟಿಸಿ, ಜನನ, ಮರಣ ಪ್ರಮಾಣ ಪತ್ರದಿಂದ ಅನೇಕ ಶುಲ್ಕ ಹೆಚ್ಚಿಸಲಾಗಿದೆ. ರೈತರು ಟ್ರಾನ್ಸ್‌ ಫಾರಂ ಹಾಕಿಸಲು ₹3 ಲಕ್ಷ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು: ಡಿಸಿಎಂ ಪರಮೇಶ್ವರ್ ಭೇಟಿ
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಲಹೆ