ನರಗುಂದ: ನರಗುಂದ ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಅವರು ವಿರೋಧ ಪಕ್ಷವಾದ ಬಜೆಪಿ ಶಾಸಕ ಸಿ.ಸಿ.ಪಾಟೀಲ್ ಅವರ ಜತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದರಿಂದ ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಗೆ ಕಷ್ಟವಾಗುತ್ತಿದೆ ಎಂದು ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಆರ್. ಯಾವಗಲ್ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಈ ಕ್ಷೇತ್ರಕ್ಕೆ ಬರುವಾಗ ಸೌಜನ್ಯಕ್ಕೂ ನನಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವುದು ಹೇಗೆ? ಎಂದು ಪ್ರಶ್ನೆ ಮಾಡಿದರು.
ನಾನು ಕೂಡ 5 ಬಾರಿ ಶಾಸಕನಾಗಿ, ಸಚಿವನಾಗಿ, ವಿಧಾನಸಭೆ ಉಪಸ್ಪೀಕರ್ ಆಗಿ ಕೆಲಸ ಮಾಡಿದ್ದೇನೆ. ಇಲ್ಲಿಯವರಗೆ ನಾನು ಯಾರ ಬಗ್ಗೆಯೂ ದೂರು ಸಲ್ಲಿಸಿಲ್ಲ. ಈಗ ತಾಳ್ಮೆ ಮೀರಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ವಿರೋಧ ಪಕ್ಷದವರ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ದೂರ ನೀಡಲಾಗುವುದು. ರಾಜ್ಯ ಕಾಂಗ್ರೆಸ್ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪಕ್ಷ ಬಿಡುವ ಸ್ಥಿತಿ ಬರಬಹುದು ಎಂದು ಹೇಳಿದರು.ಈ ಹಿಂದೆ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಪುರಸಭೆ ಹೊಸ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿ, ಅನುದಾನ ತಂದು ಕಾಮಗಾರಿ ಆರಂಭಿಸಲಾಗಿತ್ತು. ಅಂದು ಈ ಕಾರ್ಯವನ್ನು ವಿರೋಧಿಸಿದ್ದ ಉಸ್ತುವಾರಿ ಸಚಿವರು ಈಗ ನಾನೇ ಅನುದಾನ ತಂದು ಪುರಸಭೆ ಕಟ್ಟಡ ನಿರ್ಮಿಸಿದ್ದೇನೆ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದು ಯಾವಗಲ್ಲ ಹೇಳಿದರು.
ನವೆಂಬರ್ ಕ್ರಾಂತಿಯ ಬಗ್ಗೆ ಕೇಳಿದಾಗ, ಆ ಬಗ್ಗೆ ಹೈಕಮಾಂಡರ್‌ನವರು ನಿರ್ಣಯ ತೆಗೆದುಕೊಳ್ಳತ್ತಾರೆ ಎಂದು ಹೇಳಿದರು.