ಮುಂಡರಗಿ: ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ಇದೀಗ 70 ವರ್ಷಗಳು ಕಳೆದಿವೆ. ರಾಜ್ಯದ ಸಾಧನೆಗಳ ಸಿಂಹಾವಲೋಕನ ಮಾಡಲು, ಹಾಗೆಯೇ ಮುಂದಿನ ಗುರಿಗಳನ್ನು ಸ್ಪಷ್ಟವಾಗಿಸಲು ಕನ್ನಡಿಗರಾದ ನಾವೆಲ್ಲರೂ ಶ್ರಮಿಸೋಣ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಕರೆ ನೀಡಿದರು.
70 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಾಕಷ್ಟು ಶ್ರೀಮಂತವಾಗಿದೆ. ಜಗತ್ತಿನ ಕೋಟ್ಯಂತರ ಜನ ಮಾತನಾಡುವ ಭಾಷೆ ಕನ್ನಡ, ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ಭಾಷೆಯ ಅಧ್ಯಯನಕ್ಕಾಗಿ ಕನ್ನಡ ವಿಶ್ವವಿದ್ಯಾಲಯ, ಜಾನಪದ ಕಲೆಗಳ ಅಧ್ಯಯನಕ್ಕಾಗಿಯೇ ಜಾನಪದ ವಿಶ್ವವಿದ್ಯಾಲಯ ಸ್ಥಾಪಿತವಾಗಿದೆ. ಇವೆಲ್ಲವೂ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿವೆ ಎಂದರು.
ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಅವರ ಕನ್ನಡ ಸಾಹಿತ್ಯ ಕೃಷಿಯನ್ನು ಮೆಚ್ಚಿ ತಾಲೂಕು ಆಡಳಿತದಿಂದ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ವಾಮಿಜಿ, ಭಾಷಾವಾರು ರಾಜ್ಯಕ್ಕಾಗಿ ಹೋರಾಟ ಮಾಡುತ್ತಾ ಕನ್ನಡ ನೆಲೆ, ಜಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಗಡಿನಾಡ ಕನ್ನಡಿಗರಿಗೆ ಕನ್ನಡ ಕಲಿಯಲು ಅವಕಾಶ ಮಾಡುಕೊಡುತ್ತಿಲ್ಲ. ಕನ್ನಡಿಗರು ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡುವ ಬದಲು ಎಲ್ಲರಿಗೂ ಕನ್ನಡ ಆದ್ಯತೆ ಆಗಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಕಿತ್ತೂರು ಚೆನ್ನಮ್ಮನ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದ ರಫೀಕ್ ಮುಲ್ಲಾ, ಸದಸ್ಯರಾದ ಪ್ರಹ್ಲಾದ ಹೊಸಮನಿ, ಪವನ್ ಮೇಟಿ, ರಾಜಾಸಾಬ್ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ರೆಹೆಮಾನಸಾಬ್ ಮಲ್ಲನಕೇರಿ, ಶಿವಾನಂದ ಬಾರಕೇರ, ತಾಪಂ ಇಒ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸುಗಲ್, ಲೋಕೋಪಯೋಗಿ ಇಲಾಖೆಯ ಬಸವರಾಜ, ಸಿಡಿಪಿಒ ಮಹಾದೇವ್ ಇಸರನಾಳ, ಸಾಮಾಜಿಕ ಅರಣ್ಯಾಧಿಕಾರಿ ಸುನಿತಾ, ಸಮಾಜ ಕಲ್ಯಾಣಾಧಿಕಾರಿ ಉದಯಕುಮಾರ ಯಲಿವಾಳ ಉಪಸ್ಥಿತರಿದ್ದರು.ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣೀಗೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹನಮರಡ್ಡಿ ಇಟಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.