ಕಲಘಟಗಿ:
ಪಟ್ಟಣದ ಆಂಜನೇಯ ವೃತ್ತದಲ್ಲಿ ಕರ್ನಾಟಕ ಸಂಗ್ರಾಮ ಸೇನೆ ವತಿಯಿಂದ ಕನ್ನಡ ಧ್ವಜಾರೋಹಣದ ಮೂಲಕ ಪಟ್ಟಣದಲ್ಲಿ 101 ಮೀಟರ್ ಉದ್ದದ ಕನ್ನಡ ಬಾವುಟದ ಮೆರವಣಿಗೆ ಮಾಡಲಾಯಿತು.
ಈ ವೇಳೆ ಸೇನೆಯ ತಾಲೂಕು ಅಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ, ಕನ್ನಡ ಭಾಷೆಯ ಉಳಿವಿಗೆ ಇಂತಹ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಒಟ್ಟುಗೂಡಿ ಆಚರಿಸುವುದು ಅವಶ್ಯವಾಗಿದೆ ಎಂದರು.ಪಟ್ಟಣದ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆಡಳಿತ ಕಚೇರಿ ಹಾಗೂ ಕನ್ನಡ ಪರ ಸಂಘಟನೆಗಳ ವತಿಯಿಂದ ತಾಲೂಕಿನ ವಿವಿಧ ಗಣ್ಯರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕರವೇ ತಾಲೂಕು ಅಧ್ಯಕ್ಷ ಸಚಿನ್ ಪವಾರ ಮಾತನಾಡಿ, ಅಂಗಡಿಗಳಿಗೆ ಕನ್ನಡದ ನಾಮಫಲಕಗಳು ಕಡ್ಡಾಯವಾಗಿ ಇರಬೇಕು. ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಲು ಕನ್ನಡ ಭಾಷೆಯನ್ನು ಹೆಚ್ಚು ಬಳಸಬೇಕು ಎಂದರು.
ವಿದ್ಯಾರ್ಥಿಗಳು ಕನ್ನಡ ಭಾಷೆಯ ಹಿರಿಮೆ ಬಿಂಬಿಸುವ ಹಾಡುಗಳಿಗೆ ನೃತ್ಯ ಮಾಡಿದರು ಹಾಗೂ ಪುಟಾಣಿ ಮಕ್ಕಳು ರಾಣಿ ಚೆನ್ನಮ್ಮನಂತಹ ಮಹನೀಯರ ವೇಷ ಧರಿಸಿ ಕಾರ್ಯಕ್ರಮಕ್ಕೆ ರಂಗು ತಂದರು.
ಪಟ್ಟಣದ ಯುವಶಕ್ತಿ ಸರ್ಕಲ್‌ನಲ್ಲಿ ಕರುನಾಡು ಕಾರ್ಮಿಕರ ವೇದಿಕೆ ವತಿಯಿಂದ ರಾಜ್ಯೋತ್ಸವ ಆಚರಿಸಲಾಯಿತು. ಈ ವೇಳೆ ಕೂಲಿ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು. ತಾಲೂಕು ಅಧ್ಯಕ್ಷ ಮಂಜುನಾಥ ಬೋವಿ, ನಗರ ಘಟಕದ ಅಧ್ಯಕ್ಷ ಶಿವರಾಜ್ ಡೆಂಬೆ ಹಾಗೂ ಕಾರ್ಯಕರ್ತರು ಹಾಜರಿದ್ದರು.