ಯಲ್ಲಾಪುರ: ಬಿಜೆಪಿ ಸಂಸದರು ಕಳೆದ ೩೦ ವರ್ಷಗಳಿಂದ ಏನೂ ಕೆಲಸ ಮಾಡಿಲ್ಲವೆಂದು ಜನ ಹೇಳುತ್ತಿದ್ದಾರೆ. ಈ ಬಾರಿ ಜನರ ಆಶೀರ್ವಾದ ಕಾಂಗ್ರೆಸ್‌ಗಿದೆ. ಡಾ. ಅಂಜಲಿಗೆ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಅಭಿಪ್ರಾಯ ಬರುತ್ತಿದೆ. ಕಾಂಗ್ರೆಸ್ ಪರ ಅಲೆ ಇದ್ದು, ಸರ್ಕಾರದ ಐದು ಗ್ಯಾರಂಟಿ ಮೇಲೆ ಜನರಿಗೆ ವಿಶ್ವಾಸವಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.
ಸಂಸದರಾಗಿ ಆಶೀರ್ವಾದ ಸಿಕ್ಕರೆ ಸಂಸತ್‌ನಲ್ಲಿ ಖಂಡಿತವಾಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತಾಡುತ್ತೇನೆ. ಇದು ನನ್ನ ಕ್ಷೇತ್ರ. ಜನ ವಿಶ್ವಾಸದಿಂದ ಆಶೀರ್ವದಿಸಿದರೆ ಜಿಲ್ಲೆಯ ಸಮಸ್ಯೆಗಳಿಗೆ ಹೋರಾಟಕ್ಕೆ ಸಿದ್ಧಳಿದ್ದೇನೆ ಎಂದ ಅವರು, ಗ್ಯಾರಂಟಿ ಯೋಜನೆ ಚುನಾವಣೆ ಸಮಯದಲ್ಲಿ ಕೊಡುವ ದುಡ್ಡಲ್ಲ. ಇದು ಜನರ ದುಡ್ಡು. ಅವರ ಹಣವನ್ನು ಅವರಿಗೆ ಕೊಡುತ್ತಿದ್ದೇವೆ. ಅದಾನಿ, ಅಂಬಾನಿಗೆ ಕೊಡುವ ದುಡ್ಡೂ ಅಲ್ಲ. ಆಪರೇಷನ್ ಕಮಲದ ಹಣವಲ್ಲ. ಬಿಜೆಪಿ, ಜೆಡಿಎಸ್ ನಾಯಕರೂ ಕೂಡ ನಮ್ಮ ಗ್ಯಾರಂಟಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಯ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಕೆಲಸವನ್ನೂ ಮಾಡಿದ್ದೇವೆ. ಅದರಿಂದಲೂ ಜನರ ಬಳಿ ಹೋಗುತ್ತಿದ್ದೇವೆ. ಚುನಾವಣೆ ಬಳಿಕ ಕೊಟ್ಟ ಭರವಸೆಯನ್ನು ಈಡೇರಿಸಿರುವುದರಿಂದ ಗ್ಯಾರಂಟಿ ಹೆಸರಿನಲ್ಲೂ ಮತ ಕೇಳುತ್ತಿದ್ದೇವೆ ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆ ಸಮಯದಲ್ಲೇ ಯಾಕೆ ಬಂಧಿಸಬೇಕು? ಹಗರಣವಿದ್ದರೆ ತನಿಖೆ ಮಾಡಲಿ. ನಿಯಮದ ಪ್ರಕಾರ ಅವರು ನೋಟಿಸ್ ಎದುರಿಸಿದ್ದಾರೆ. ಅವರು ಕೂಡ ದೇಶದ ನಾಗರಿಕ. ಅವರು ೯ ಬಾರಿ ನೋಟಿಸ್ ಬಂದರೂ ಪ್ರತಿಕ್ರಿಯಿಸಿಲ್ಲ ಎಂದಾದರೆ ಇವರದೇ ಕೇಂದ್ರ ಸರ್ಕಾರವಿದೆ; ಗೃಹ ಸಚಿವರು, ದೆಹಲಿ ಪೊಲೀಸರು ಇದ್ದಾರೆ. ೯ ನೋಟಿಸ್‌ವರೆಗೆ ಯಾಕೆ ಬಂಧಿಸದೆ ಕಾಯಬೇಕಿತ್ತು? ಅದು ಕೂಡ ರಾಜಕಾರಣ ಅಲ್ಲವೇ ಎಂದರು.ತಾಯಿಗೆ ಯಾವತ್ತೂ ಜೋಡಣೆ ಗೊತ್ತು. ಮನೆ ಒಡೆಯಲು ಗೊತ್ತಿಲ್ಲ. ಜಿಲ್ಲೆ ಒಡೆಯುವ ಬಗೆಗಿನ ಚರ್ಚೆ ಬಗ್ಗೆ ಎಂದೂ ಯಾವ ಯೋಚನೆಯನ್ನೂ ಮಾಡಿಲ್ಲ ಎಂದ ಅವರು, ಶಾಸಕ ಶಿವರಾಮ ಹೆಬ್ಬಾರ್ ನನ್ನನ್ನು ಭೇಟಿಯಾಗಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರಬಹುದು, ಆದರೆ ಗೊತ್ತಿಲ್ಲ ಎಂದರು.