ಹಳಿಯಾಳ: ಚುನಾವಣೆಯು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾಗಿದ್ದು, ಈ ದೊಡ್ಡ ಹಬ್ಬದಲ್ಲಿ ನಾವೆಲ್ಲರೂ ಪಾಲ್ಗೊಂಡು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಲು ಮುಂದಾಗೋಣ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕರೆ ನೀಡಿದರು.
ಮತದಾರರು ಮತದಾನದಿಂದ ವಂಚಿತರಾಗಬಾರದು ಎಂಬ ಹಿನ್ನೆಲೆ ಈ ಸ್ವೀಪ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಆ ದಿನ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತಗಟ್ಟೆಯಲ್ಲಿ ಮತದಾರರಿಗೆ ಎಲ್ಲ ಸೌಲಭ್ಯಗಳನ್ನು ಮಾಡಿದ್ದೇವೆ. ಇದರ ಜತೆಗೆ 80 ವಯಸ್ಸಿಗಿಂತ ಹೆಚ್ಚಾದ ಹಿರಿಯ ನಾಗರಿಕರಿಗೆ ಅವರು ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯನ್ನು ಈ ಚುನಾವಣೆಯಲ್ಲಿ ಕಲ್ಪಿಸಲಾಗಿದೆ ಎಂದರು.ನೂರು ವರ್ಷವಾಗಿದೆ, ಆದರೂ ನಾವು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತೇವೆ ಎಂದು ಹೇಳುವರಿಗೆ ನಾವು ತುಂಬು ಹೃದಯದ ಸ್ವಾಗತ ಕೋರಲಿದ್ದೇವೆ ಎಂದರು.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರವು ಶೇ. 75ರಷ್ಟು ಮತದಾನ ಪ್ರಮಾಣವನ್ನು ಕಂಡಿತು. ಇದು ರಾಜ್ಯದಲ್ಲಿಯೇ ಅತ್ಯಂತ ಗರಿಷ್ಠ ಮತದಾನ ಪ್ರಮಾಣವಾಗಿತ್ತು. ಕಳೆದ ಬಾರಿಯ ಮತದಾನದ ಪ್ರಮಾಣದ ದಾಖಲೆಯನ್ನು ಮೀರಿಸುವ ಗುರಿಯೊಂದಿಗೆ ನಾವೆಲ್ಲರೂ ಮತದಾನ ಜಾಗೃತಿಯನ್ನು ಈ ಬಾರಿ ಹಮ್ಮಿಕೊಳ್ಳಬೇಕಾಗಿದೆ ಎಂದರು.
ಹಳಿಯಾಳ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸ್ಟೇಲ್ಲಾ ವರ್ಗಿಸ್, ತಾಪಂ ಇಒ ಪರಶುರಾಮ ಘಸ್ತೆ, ತಹಸೀಲ್ದಾರ್ ಆರ್.ಎಚ್. ಭಾಗವಾನ, ಗ್ರೇಡ್-2 ತಹಸೀಲ್ದಾರ್ ಜಿ.ಕೆ. ರತ್ನಾಕರ, ಸಿಡಿಪಿಒ ಡಾ. ವಿಜಯಲಕ್ಷ್ಮೀ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ ಇತರರು ಇದ್ದರು.
ಜಾಗೃತಿ ಜಾಥಾದ ನಂತರ ತಾಲೂಕು ಆಡಳಿತ ಸೌಧದ ಆವರಣದ ಹೊರಗೆ ಹೊಂಗಿರಣ ಕಲಾ ತಂಡದಿಂದ ಮತದಾನದ ಜಾಗೃತಿ ಕುರಿತು ಗೊಂಬೆಯಾಟದ ಪ್ರದರ್ಶನವು ನಡೆಯಿತು.