ಶೈಕ್ಷಣಿಕ, ರಾಜಕೀಯವಾಗಿ ತಿಗಳ ಸಮಾಜ ಮೇಲೆತ್ತಲು ಒಂದಾಗಿ: ಶಾಸಕ ಜ್ಯೋತಿ ಗಣೇಶ

KannadaprabhaNewsNetwork |  
Published : Mar 29, 2024, 12:57 AM IST

ಸಾರಾಂಶ

ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮಾಜವನ್ನು ಮೇಲೆತ್ತಲು ಎಲ್ಲಾ ನಾಯಕರು ಒಗ್ಗೂಡಿ ಕೆಲಸ ಮಾಡುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮಾಜವನ್ನು ಮೇಲೆತ್ತಲು ಎಲ್ಲಾ ನಾಯಕರು ಒಗ್ಗೂಡಿ ಕೆಲಸ ಮಾಡುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಸಲಹೆ ನೀಡಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಹಾಗೂ ಸಮಸ್ತ ಆಗ್ನಿವಂಶ ತಿಗಳ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಯನ್ನೇ ನಂಬಿ ಬದುಕುತ್ತಿರುವ ತಿಗಳ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಉಳಿದಿವೆ. ಈ ಕ್ಷೇತ್ರಗಳಲ್ಲಿ ಮುಂದೆ ಬರಲು ಒಗ್ಗಟ್ಟು ಅತಿ ಮುಖ್ಯವಾಗಿದೆ. ಚುನಾವಣಾ ನೀತಿ ಸಂಹಿತೆಯಿಂದ ಜಿಲ್ಲಾಡಳಿತ ಸರಳವಾಗಿ ಜಯಂತಿಯನ್ನು ಆಚರಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಆಚರಿಸುವಂತಾಗಲಿ ಎಂದು ಶುಭ ಕೋರಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ತಿಗಳ ಸಮುದಾಯ ತುಮಕೂರು ಗುಬ್ಬಿ, ನೆಲಮಂಗಲ ಸೇರಿದಂತೆ ಬೆಂಗಳೂರು ಸುತ್ತಮುತ್ತ ಇರುವ ಅತ್ಯಂತ ಸಣ್ಣ ಸಮುದಾಯ. ಕೃಷಿ ಮತ್ತು ತೋಟಗಾರಿಕೆಯ ನ್ನೇ ನಂಬಿ ಬದುಕುವ ಈ ಸಮುದಾಯಕ್ಕೆ ರಾಜಕೀಯ ಅಧಿಕಾರವೇ ಇಲ್ಲದಂತಾಗಿದೆ. ಇಂದಿಗೂ ತನ್ನದೇ ಆದ ಆಚಾರ, ವಿಚಾರಗಳನ್ನು ಅನುಸರಿಸುತ್ತಾ, ಈ ಅಧುನಿಕ ಯುಗದಲ್ಲಿಯೂ ಬುಡಕಟ್ಟು ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿರುವ ಸಮುದಾಯ ಇದಾಗಿದೆ. ಹಿರಿಯರಿಗೆ ಗೌರವದ ಜೊತೆಗೆ, ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾ, ತಮ್ಮಲ್ಲಿನ ಸಮಸ್ಯೆಗಳನ್ನೇ ಹಿರಿಯರ ಸಮ್ಮುಖದಲ್ಲಿಯೇ ಬಗೆಹರಿಸಿಕೊಂಡು ಮುನ್ನೆಡೆಯುತ್ತಿರುವ ಸಮದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕಿದೆ ಎಂದರು.

ಅಗ್ನಿಬನ್ನಿರಾಯಸ್ವಾಮಿ ಜಯಂತಿಗೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಮುಖಂಡ ರೇವಣ್ಣ ಸಿದ್ದಯ್ಯ, ಸಪ್ತರ್ಷಿಗಳು ನಾಡಿನಲ್ಲಿ ಕ್ಷೋಭೆ ಹೆಚ್ಚಾಗದಾಗ ಅದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶಿವನ ಕುರಿತು ತಪಸ್ಸು ಮಾಡಿದಾಗ ಆಗ್ನಿಕುಂಡದಿಂದ ಹುಟ್ಟಿದ ನಮ್ಮ ಕುಲದೈವವಾದ ಶ್ರೀಅಗ್ನಿಬನ್ನಿರಾಯಸ್ವಾಮಿಗೆ ಇಂದ್ರನ ಮಗಳನ್ನು ಕೊಟ್ಟು ಮದುವೆ ಮಾಡಲಾಗುತ್ತದೆ. ಸಮಸ್ತ ತಿಗಳ ಜನಾಂಗವೂ ಅವರ ವಂಶಸ್ಥರು. ಇಂದಿಗೂ ತರಕಾರಿ, ಹಣ್ಣು, ಹೂವು, ಎಲೆ, ಅಡಿಕೆ ಬೆಳೆದುಕೊಂಡು ಬದುಕುತ್ತಿರುವ ಈ ಸಮೂಹ ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ ಎಂದರು.

ವೇದಿಕೆಯಲ್ಲಿ ಯಜಮಾನರುಗಳಾದ ಹನುಮಂತರಾಜು, ಶಿವಕುಮಾರ್, ಕುಂಭಯ್ಯ, ನಾರಾಯಣಸ್ವಾಮಿ, ಕುಂಬಣ್ಣ, ಹಿರಿಯರಾದ ಹನುಮದಾಸ್, ಶಿವಣ್ಣ, ಪ್ರೊ.ಅಂಜನೇಯ, ಅಣೆತೋಟ ಶ್ರೀನಿವಾಸ್, ಕ್ಯಾರೇಟ್ ರಾಮಣ್ಣ, ಲೋಕೇಶ್, ಅಣೇಕಾರರು, ಮುದ್ರೆಯವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸುರೇಶಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!