ಬಿಜೆಪಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು: ಡಿಕೆ ಶಿವಕುಮಾರ

KannadaprabhaNewsNetwork |  
Published : Feb 04, 2024, 01:37 AM IST
ಡಿಕೆ ಶಿವಕುಮಾರ್‌ | Kannada Prabha

ಸಾರಾಂಶ

ರಾಜ್ಯದ ಪಾಲಿಗೆ ಬರಬೇಕಾದ ಬರ ನಿರ್ವಹಣೆ ಅನುದಾನ ನೀಡಲು ಕೇಂದ್ರ ಸರಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸಂಸದರು, ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಒಟ್ಟಾಗಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ದಿಲ್ಲಿಗೆ ನಮ್ಮ ಧ್ವನಿ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕದಲ್ಲಿ ಅತ್ಯಂತ ಹೀನಾಯವಾದ ಬರ ಕಾಡುತ್ತಿದ್ದಾಗ್ಯೂ ಕೇಂದ್ರ ಸರಕಾರ ತನ್ನ ಪಾಲಿನ ಅನುದಾನ ನೀಡದೆ ಮೀನಮೇಷ ಎಣಿಸುತ್ತಿರುವುದನ್ನು ವಿರೋಧಿಸಿ ಇದೇ ಫೆ.7ರಂದು ದಿಲ್ಲಿಯಲ್ಲಿ ಸ್ವತಃ ರಾಜ್ಯ ಸರಕಾರದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರಕ್ಕೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ಪಾಲಿಗೆ ಬರಬೇಕಾದ ಬರ ನಿರ್ವಹಣೆ ಅನುದಾನ ನೀಡಲು ಕೇಂದ್ರ ಸರಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸಂಸದರು, ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಒಟ್ಟಾಗಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ದಿಲ್ಲಿಗೆ ನಮ್ಮ ಧ್ವನಿ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಅದೇದಿನ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವ ಕುರಿತು ಗಮನ ಸೆಳೆದಾಗ ಗರಂ ಆದ ಡಿಕೆಶಿ, ಬಿಜೆಪಿಯವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ಪ್ರಧಾನಮಂತ್ರಿಗಳನ್ನು ಒಮ್ಮೆಯಾದರೂ ಭೇಟಿ ಮಾಡಿ ರಾಜ್ಯ ಸರಕಾರಕ್ಕೆ ಬರಬೇಕಾದ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದಾರಾ? ಎಂದು ಪ್ರಶ್ನಿಸಿದರಲ್ಲದೆ, ಅವರಿಗೆ ಮಾನ-ಮರ್ಯಾದೆ ಇದ್ದರೆ ಮೊದಲು ನಮ್ಮ ರಾಜ್ಯದ ಬರ ಪರಿಸ್ಥಿತಿ ಕುರಿತು ದನಿ ಎತ್ತಲಿ ನೋಡೋಣ ಎಂದು ಸವಾಲು ಹಾಕಿದರು.

ಕನಕಗುರು ಪೀಠದ ಈಶ್ವರಾನಂದಪುರಿ ಶ್ರೀಗಳು ದೇವಸ್ಥಾನ ಪ್ರವೇಶಿಸಿದ ಬೆನ್ನಲ್ಲೇ ದೇವಸ್ಥಾನ ಸ್ವಚ್ಛಗೊಳಿಸಿದ ಘಟನೆ ಕುರಿತು ಪ್ರಸ್ತಾಪಿಸಿದ ಅವರು, ‘ನಾನು ಪೇಪರ್ ನಲ್ಲಿ ಗಮನಿಸಿದೆ. ಸಾಮಾನ್ಯವಾಗಿ ದೇವಸ್ಥಾನವನ್ನು ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಸ್ವಚ್ಛಗೊಳಿಸುತ್ತಾರೆ. ಆದರೂ, ಏನಾಗಿದೆ ಎಂಬುದನ್ನು ತಾವು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿ ತಿಳಿದುಕೊಳ್ಳುವುದಾಗಿ ಹೇಳಿದರು.

ನಮ್ಮ ರಾಜ್ಯದಲ್ಲಿ ಯಾವುದೇ ಅಸ್ಪೃಶ್ಯತೆ ಆಚರಣೆ ಇಲ್ಲ. ನಮ್ಮಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂದು ಅವರು ಇದೇ ಘಟನೆಗೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಿದರು.

ಸಿಎಂ ಸಿದ್ದರಾಮಯ್ಯ ಕುಂಕುಮ ಹಚ್ತಾರೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಎಲ್ಲರಂತೆಯೇ ಕುಂಕುಮ ಹಚ್ಚುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಜಾಯಿಷಿ ನೀಡಿದರು.ಸಿಎಂ ಸಿದ್ದರಾಮಯ್ಯ ಅವರೇಕೆ ಕುಂಕುಮ ಹಚ್ಚೋದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕುಂಕುಮ ಇಟ್ಟುಕೊಳ್ಳಲ್ಲ ಅಂತ ಯಾರು ಹೇಳಿದ್ದು ಎಂದು ಪ್ರಶ್ನಿಸಿದರಲ್ಲದೆ, ಹಚ್ಕೋತಾರೆ. ಆದರೆ, ಹೆಣ್ಣು ಮಕ್ಕಳ ಹಾಗೆ ಹಣೆಯ ಮೇಲೆ ಇಷ್ಟಗಲ ಇಟ್ಟುಕೊಳ್ಳೋಕೆ ಆಗುತ್ತಾ ಎಂದು ಮುಗುಳ್ನಕ್ಕರು. ಕೆಲವರಿಗೆ ಅಲರ್ಜಿ ಇರುತ್ತದೆ. ಅವರಿಗೂ ಬಹುಶಃ ಅಲರ್ಜಿ ಇರಬಹುದು. ನಾನು ಯಾವತ್ತೂ ಸುಗಂಧ ರಾಜ ಹೂ ಮುಟ್ಟುವುದಿಲ್ಲ. ಸುಗಂಧರಾಜ ಹೂ ಎಂದರೆ ನನಗೆ ಅಲರ್ಜಿ. ನನಗೆ ಯಾರೂ ಸುಗಂಧರಾಜ ಹೂವು ಇರುವ ಹಾರ ಹಾಕಬೇಡಿ ಎಂದು ಪತ್ರದಲ್ಲೇ ಬರೆದಿದ್ದೇನೆ ಎಂದರು.

ಕಲಬುರಗಿ ಲೋಕಸಭೆ ಅಭ್ಯರ್ಥಿ ನಾನೇ: ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಸ್ಯ ಚಾಟಕಿ ಹಾರಿಸಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಸುದ್ದಿಗಾರರ ಪ್ರಶ್ನೆಯನ್ನು ತಿಳಿಹಾಸ್ಯದ ರೀತಿಯಲ್ಲಿ ಸ್ವೀಕರಿಸಿದ ಅವರು, ‘ಕಲಬುರಗಿಗೆ ನಾನೇ ಲೋಕಸಭೆ ಅಭ್ಯರ್ಥಿ’ ಎಂದರು.

ಸಂಸದ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ರಾಷ್ಟ್ರದ ವಿಚಾರ ಪ್ರಸ್ತಾಪಿಸಿದ ಅವರು, ಇಡೀ ಭಾರತ ಒಂದು. ಕಾಂಗ್ರೆಸ್ ಪಕ್ಷವೇ ಭಾರತವನ್ನು ಒಟ್ಟುಗೂಡಿಸಿದೆ. ಕಾಂಗ್ರೆಸ್ ಪಕ್ಷದ ನಮ್ಮ ಎಲ್ಲ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಏನಿದ್ದರೂ ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ಸಮಾನವಾಗಿ ಹಣ ಹಂಚಬೇಕು ಎಂಬುದನ್ನು ಒತ್ತಿ ಹೇಳುವಾಗ ಹಾಗೆ ಹೇಳಿರಬಹುದು ಎಂದು ಡಿ.ಕೆ.ಸುರೇಶ್ ಹೆಸರು ಉಲ್ಲೇಖಿಸದೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು