ಬಿಜೆಪಿ ಅಪಪ್ರಚಾರಕ್ಕೆ ಹೆದರುವುದಿಲ್ಲ: ಜಮೀರ್ ಅಹ್ಮದ್ ಖಾನ್

KannadaprabhaNewsNetwork | Published : Oct 30, 2024 12:42 AM

ಸಾರಾಂಶ

ವಕ್ಫ್‌ ಆಸ್ತಿಯಾಗಲಿ, ಮುಜರಾಯಿ ಆಸ್ತಿಯಾಗಲಿ ಅದು ದೇವರ ಆಸ್ತಿ. ದಾನಿಗಳು ಸಮುದಾಯದ ಹಿತಕ್ಕೆ ನೀಡಿರುವ ಆಸ್ತಿ. ಅದನ್ನು ಉಳಿಸುವುದು ನಮ್ಮ ಕರ್ತವ್ಯ ಆಗಬೇಕು.

ಹುಬ್ಬಳ್ಳಿ:

ವಕ್ಫ್‌ ಆಸ್ತಿ ತೆರವು ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ಹೆದರುವುದಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್‌ ಆಸ್ತಿ ತೆರವು ಸಂಬಂಧ ನೋಟಿಸ್ ನೀಡುವ ಪ್ರಕ್ರಿಯೆ ಎಲ್ಲ ಸರ್ಕಾರದಲ್ಲೂ ನಡೆದಿದೆ. ಬಿಜೆಪಿ ಸರ್ಕಾರದಲ್ಲೂ ಕೊಡಲಾಗಿದೆ. ಆದರೆ, ಈಗ ಚುನಾವಣೆ ಲಾಭಕ್ಕಾಗಿ ಬಿಜೆಪಿ ಈ ವಿಚಾರದಲ್ಲಿ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್‌ ಆಸ್ತಿಯಾಗಲಿ, ಮುಜರಾಯಿ ಆಸ್ತಿಯಾಗಲಿ ಅದು ದೇವರ ಆಸ್ತಿ. ದಾನಿಗಳು ಸಮುದಾಯದ ಹಿತಕ್ಕೆ ನೀಡಿರುವ ಆಸ್ತಿ. ಅದನ್ನು ಉಳಿಸುವುದು ನಮ್ಮ ಕರ್ತವ್ಯ ಆಗಬೇಕು. ಮುಜರಾಯಿ ಆಸ್ತಿ ತೆರವು ಮಾಡಲು ನಾನೂ ಜತೆಗೂಡುತ್ತೇನೆ. ಆದರೆ, ಅಪಪ್ರಚಾರ ನಿಲ್ಲಿಸಿ ಎಂದರು.

ನಾನು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇನೆ. ಗೆಜೆಟ್ ಅಧಿಸೂಚನೆ ಹಾಗೂ ನ್ಯಾಯಾಲಯ ಆದೇಶದ ಪ್ರಕಾರ ವಕ್ಫ್‌ ಆಸ್ತಿ ಸಂರಕ್ಷಣೆ ಮಾಡಲಾಗುತ್ತಿದೆ. ಬಿಜೆಪಿಯವರ ಆರೋಪದಂತೆ ಸಿಕ್ಕಸಿಕ್ಕ ಜಾಗ ವಕ್ಫ್‌ ಆಸ್ತಿ ಎಂದು ಎಲ್ಲೂ ಹೇಳಿಲ್ಲ, ಅದಕ್ಕೆ ಖಾತೆ ಮಾಡಿಕೊಡಲು ಕೇಳಿಲ್ಲ. ಹಾಗೆ ಮಾಡಿಕೊಡಲು ಸಾಧ್ಯವಿಲ್ಲ. ಸಾಮಾನ್ಯ ಜ್ಞಾನ ಇರುವ ಯಾವುದೇ ವ್ಯಕ್ತಿಗೆ ಇದು ಗೊತ್ತಿರುತ್ತದೆ. ಆದರೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ಒತ್ತುವರಿ ಮಾಡಿದ್ದರೆ ಅದನ್ನು ತೆರವು ಮಾಡುವುದು ತಪ್ಪೇ ಎಂದು ಪ್ರಶ್ನಿಸಿದರು.

ಖಾದ್ರಿ ಜತೆ ಆಗಮನ:

ಶಿಗ್ಗಾಂವಿ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಅವರೊಂದಿಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಜಮೀರ್ ಅಹ್ಮದ್ ಖಾನ್, ಬುಧವಾರ ಖಾದ್ರಿ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿ ಯಾಸೀನ್ ಪಠಾಣ್ ಪರ ಕೆಲಸ ಮಾಡಲಿದ್ದು, ಕಾಂಗ್ರೆಸ್ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

ಈ ವೇಳೆ ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ವಕ್ಫ್‌ ಬೋರ್ಡ್‌ ಮಾಜಿ ಅಧ್ಯಕ್ಷ ಅನ್ವರ್ ಬಾಷಾ, ಅಲ್ತಾಫ್ ಕಿತ್ತೂರ, ಅಲ್ತಾಫ್ ಅಳ್ಳೂರ, ಅನಿಲಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.

ನಾಮಪತ್ರ ವಾಪಸ್‌: ಖಾದ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾತಿಗೆ ಒಪ್ಪಿ ಅವರ ಮೇಲೆ ಭರವಸೆ ಇಟ್ಟು ನಾಮಪತ್ರ ವಾಪಸ್ ಪಡೆಯಲಿದ್ದೇನೆ. ಇದಕ್ಕೆ ಯಾವುದೇ ಷರತ್ತು ಹಾಕಿಲ್ಲ ಎಂದು ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಸ್ಪಷ್ಟಪಡಿಸಿದರು.

Share this article