ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾಡಳಿತ ಭವನದಲ್ಲಿ ಎಡಿಸಿ ಪಿ.ಎನ್.ಲೋಕೇಶರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಿಯೋಗವು, ಭದ್ರಾ ಜಲಾಶಯವು 6 ಜಿಲ್ಲೆಗಳ ಸುಮಾರು 4.5 ಲಕ್ಷ ಎಕರೆ ಪ್ರದೇಶದ ಕೃಷಿಗೆ ಮತ್ತು ಕುಡಿಯುವ ನೀರಿಗೆ ನೀರಾವರಿ ಮೂಲವಾಗಿದ್ದು, ಅಲ್ಲಿ ಅವೈಜ್ಞಾನಿಕ ಕಾಮಗಾರಿ ಸರಿಯಲ್ಲ ಎಂದು ಆಕ್ಷೇಪಿಸಿತು.
ಈ ವೇಳೆ ಮಾತನಾಡಿದ ರೈತ ಮೋರ್ಚಾದ ಮುಖಂಡರು, ಭದ್ರಾ ಅಣೆಕಟ್ಟೆ ನೀರನ್ನೇ ನಂಬಿ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಭದ್ರಾ ಡ್ಯಾಂ ಬುಡದಲ್ಲೇ ಸುಮಾರು 16 ಎಕರೆ ಬಫರ್ ಝೋನ್ ಪ್ರದೇಶದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣ ಕಾಮಗಾರಿಗಳನ್ನು ಸದ್ದಿಲ್ಲದೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.ಬಫರ್ ಝೋನ್ ಪ್ರದೇಶದಲ್ಲಿ ಕಾಮಗಾರಿಗಳನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರೊದಗಿಸಲು ಜಲ ಜೀವನ ಮಿಷನ್ ಅಡಿ .00 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಭದ್ರಾ ಅಣೆಕಟ್ಟೆಯ ಅಭದ್ರತೆಗೇ ಈ ಕಾಮಗಾರಿ ಕಾರಣವಾಗಲಿದೆ. ಸಂಪೂರ್ಣ ಅವೈಜ್ಞಾನಿಕವಾಗಿರುವ ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು.
ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ದೂಡಾ ಮಾಜಿ ಅಧ್ಯಕ್ಷರಾದ ಹಿರಿಯ ವಕೀಲ ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಮುಖಂಡರಾದ ಎ.ಬಿ.ಹನುಮಂತಪ್ಪ, ಎಚ್.ಎನ್.ಶಿವಕುಮಾರ, ಕೆ.ವಿ.ಚನ್ನಪ್ಪ, ಕೆ.ಎಚ್.ಧನಂಜಯ, ಪುಲೀಯ, ಕೊಂಡಜ್ಜಿ ಹನುಮಂತ, ರಾಜುಗೌಡ ಇತರರು ಇದ್ದರು.