ಭಟ್ಕಳ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಬಗ್ಗೆ ಸಂವಿಧಾನದಲ್ಲಿ ಬದಲಾವಣೆ ತರುತ್ತೇವೆ ಎಂಬ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಇಲ್ಲಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಬುಧವಾರ ಬಿಜೆಪಿ ಮಂಡಲದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ವೃತ್ತದಲ್ಲಿ ಡಿ.ಕೆ. ಶಿವಕುಮಾರ ಪ್ರತಿಕೃತಿ ದಹನ ನಡೆಸಿದರು.
ಬಿಜೆಪಿ ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಸಂವಿಧಾನದಲ್ಲಿ ಯಾವುದೇ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಆದರೆ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಡಿ.ಕೆ. ಶಿವಕುಮಾರ್ ಮುಸ್ಲಿಮರಿಗೆ ಶೇ.೪ರ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ತಿದ್ದುಪಡಿಗೂ ಮುಂದಾಗುವ ಕುರಿತು ನೀಡಿದ ಹೇಳಿಕೆಯು ತೀರಾ ಖಂಡನೀಯವಾಗಿದೆ. ಬಿಜೆಪಿ ರಾಜ್ಯಾದ್ಯಂತ ಈ ಕುರಿತು ಪ್ರತಿಭಟನೆಯನ್ನು ಹಮ್ಮಿಕೊಂಡು ಡಿ.ಕೆ. ಶಿವಕುಮಾರ್ ಅವರನ್ನು ಪಕ್ಷದಿಂದ ಕೈಬಿಡಲು ಒತ್ತಾಯಿಸುತ್ತದೆ. ಅವರ ಹೇಳಿಕೆಯಿಂದ ಸರ್ಕಾರದ ನಿಲುವು ಏನೆಂದು ತಿಳಿಯಬೇಕಾಗಿದೆ. ತಕ್ಷಣ ಅವರನ್ನು ಉಪಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾಯರ್ಯದರ್ಶಿ ಶ್ರೀಕಾಂತ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ್, ಪ್ರಮುಖರಾದ ದಿನೇಶ ನಾಯ್ಕ, ರಾಜೇಶ ನಾಯ್ಕ, ಭಾಸ್ಕರ ದೈಮನೆ, ಪ್ರಮೋದ ಜೋಷಿ, ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ, ರಾಘವೇಂದ್ರ ನಾಯ್ಕ, ಕುಮಾರ ಹೆಬಳೆ, ಹಿಂದೂ ಜಾಗರಣ ವೇದಿಕೆಯ ಜಯಂತ ನಾಯ್ಕ, ನಾಗೇಶ ನಾಯ್ಕ ಮುಂತಾದವರಿದ್ದರು.