ಕನ್ನಡಪ್ರಭ ವಾರ್ತೆ ಚಾಮರಾಜನಗರ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.೪ರಷ್ಟು ಮೀಸಲಾತಿ ನಿರ್ಧಾರ ತಳೆದು, ಬೆಲೆ ಏರಿಕೆ ನಿಯಂತ್ರಿಸದೆ ಹಾಗೂ ೧೮ ಶಾಸಕರ ಅಮಾನತು ಮಾಡಿದ ಕಾಂಗ್ರೆಸ್ ಸರ್ಕಾರದ ನಿಲುವುಗಳನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿ, ಕೆಲಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಎಂ.ರಾಮಚಂದ್ರು, ನಿಜಗುಣರಾಜು ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿ ನೀಡುವ ನಿರ್ಧಾರ ತುಷ್ಟೀಕರಣದ ನಿರ್ಧಾರ, ವಿಧಾನಸಭೆಯಲ್ಲಿ ವಿಧಾನಸಭಾಧ್ಯಕ್ಷರು ಬಿಜೆಪಿಯ ೧೮ ಶಾಸಕರನ್ನು ೬ ತಿಂಗಳ ಕಾಲ ಅಮಾನತು ಮಾಡಿರುವುದು ಸಂಪೂರ್ಣ ಕಾನೂನುಬಾಹಿರ, ಅಸಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಎಂದು ಆರೋಪಿಸಿದರು.
ಜನರಿಂದ ಆಯ್ಕೆಯಾದ ಶಾಸಕರಿಗೆ ಅಷ್ಟೇ ಅಲ್ಲದೆ ಕ್ಷೇತ್ರದ ಮತದಾರರಿಗೂ ಮಾಡಿದ ಅವಮಾನ. ಶಾಸಕರ ಸಂವಿಧಾನದತ್ತ ಹಕ್ಕನ್ನು ಕಿತ್ತುಕೊಳ್ಳುವಂತಹ ಸಂವಿಧಾನ ಬಾಹಿರ ನಿರ್ಧಾರ, ವಿಧಾನಸಭಾಧ್ಯಕ್ಷರು ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು,ಕಾಂಗ್ರೆಸ್ ಮತ್ತೊಮ್ಮೆ ತುಷ್ಟೀಕರಣದ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಸರಕಾರಿ ಕಾಮಗಾರಿಗಳಲ್ಲಿ ಶೇ.೪ರಷ್ಟು ಮೀಸಲಾತಿ ಮುಸ್ಲಿಮರಿಗೆ ನೀಡುವುದು, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನವನ್ನು ₹೨೦ ಲಕ್ಷಗಳಿಂದ ₹೩೦ ಲಕ್ಷಗಳಿಗೆ ಹೆಚ್ಚಳ ಮಾಡಿರುವುದು, ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನ ನೀಡುವುದು, ಕಾಂಗ್ರೆಸ್‌ನ ತುಷ್ಟೀಕರಣದ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದರು.ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್‌ಗಳೂ ತೀರ್ಪು ಕೊಟ್ಟಿವೆ. ಆದರೂ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್‌ನ ನಡೆ ಡಾ. ಅಂಬೇಡ್ಕರ್‌ರವರ ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ ಅವಮಾನ ಎಂದರು.ಬಜೆಟ್‌ನಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಎಸ್‌ಸಿಎಸ್‌ಪಿ, ಟಿಎಸ್ ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಅತ್ಯಂತ ಖಂಡನೀಯ, ಕಳೆದ ೩ ವರ್ಷಗಳಲ್ಲಿ ಸುಮಾರು ೩೯ ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿರುವುದರಿಂದ ಪರಿಶಿಷ್ಟ ಜಾತಿ- ಪಂಗಡಗಳ ಸಮುದಾಯದ ಜನರಿಗೆ ತೀವ್ರ ಅನ್ಯಾಯವಾಗಿದೆ ಎಂದರು.ಇನ್ನು ಸಾಮಾನ್ಯ ಜನರ ಬದುಕಿಗೆ ಬರ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರ, ರೈತರು ತಮ್ಮ ಜಮೀನಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಳ್ಳುವ ವೆಚ್ಚವನ್ನು ೨ ಲಕ್ಷಕ್ಕೆ ಏರಿಸಿದೆ. ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ, ಸ್ಟಾಂಪ್ ಶುಲ್ಕ ಏರಿಕೆ, ಮದ್ಯದ ದರ ಏರಿಕೆಯನ್ನು ಮಾಡಿದೆ. ದಿನೇದಿನೇ ಹೊಸ ಹೊಸ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಕೂಡಲೇ ಸರಕಾರವು ಬೆಲೆ ಏರಿಕೆಯನ್ನು ಇಳಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ನಗರಸಭಾಧ್ಯಕ್ಷ ಸುರೇಶ್, ಕಾಡಹಳ್ಳಿ ಕುಮಾರ್, ಶಿವರಾಜ್, ವೀರಭದ್ರಸ್ವಾಮಿ, ಕುಮುದಾ, ಮೂಡಹಳ್ಳಿ ಮೂರ್ತಿ, ಸೂರ್ಯ, ಪಿ.ರಂಗಸ್ವಾಮಿ, ಶಿವಣ್ಣ, ರಾಮಸಮುದ್ರ ಶಿವಣ್ಣ, ಚಂದ್ರಶೇಖರ್,ಕಿಲಗೆರೆ ಕುಮಾರ್, ವರಪ್ರಸಾದ್, ಮಹದೇವಪ್ರಸಾದ್,ಕೆ.ಕೆ. ಮೂರ್ತಿ, ರೇವಣ್ಣ, ಕೂಸಣ್ಣ, ಮಹೇಶ್ ಇತರರು ಭಾಗವಹಿಸಿದ್ದರು.