ಕನ್ನಡಪ್ರಭ ವಾರ್ತೆ ವಿಜಯಪುರ
ಕೇವಲ ಜಾತಿ, ಧರ್ಮಗಳನ್ನು ಇಟ್ಟುಕೊಂಡು ಚುನಾವಣೆ ಮಾಡುವ ಬಿಜೆಪಿ ಒಂದೇ ಒಂದು ಕಡೆ ಪಕ್ಷದ ಸಾಧನೆ ಮಾಡಿದ ಕುರಿತು ಹೇಳಿ ಮತ ಕೇಳಲು ಇವರಿಂದ ಆಗುತ್ತಿಲ್ಲ. ಬಿಜೆಪಿ, ಆರ್‌ಎಸ್‌ಎಸ್ ಗಳು ಸೈಡ್‌ಲೈನ್ ಆಗಿದ್ದು, ಕೇವಲ ಮೋದಿಯ ಹೆಸರು ಮಾತ್ರ ಬರುತ್ತಿದೆ. ಬಿಜೆಪಿಯಲ್ಲಿ ಏಕಚಕ್ರಾಧಿಪತ್ಯ, ಸರ್ವಾಧಿಕಾರಿ ಧೋರಣೆ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮೇಲೆ ಚುನಾವಣಾ ಆಯೋಗ ಪ್ರತಿಯೊಂದಕ್ಕೂ ನಿರ್ಬಂಧ ಹೇರುತ್ತಿದೆ. ಆದರೆ ಧರ್ಮದ, ಜಾತಿಯ ಹೆಸರಿನಲ್ಲಿ ಮತ ಕೇಳುವ ಬಿಜೆಪಿಗೆ ಯಾವುದೇ ನಿರ್ಬಂಧ ಹಾಕಿಲ್ಲ. ಚುನಾವಣಾ ಆಯೋಗವೂ ಬಿಜೆಪಿಯ ಕೈಗೊಂಬೆಯಾಗಿದ್ದು, ಹಲ್ಲಿಲ್ಲದ ಹಾವಿನಂತಾಗಿದ್ದು, ಏಕತರಹದ ನಿರ್ಣಯ ಮಾಡುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಬಾಂಡ್‌ಗಳನ್ನು ಪಾರದರ್ಶಕ ನೀತಿ ಮಾಡಬೇಕು ಅಂತ ಮಾಡಿದ್ದೇವೆ ಎಂದು ಹೇಳುತ್ತಿರಿ. ಆದರೆ ಅದಕ್ಕೂ ಮೊದಲೇ ಗೌಪ್ಯತೆ ಕಾಪಾಡಬೇಕು ಎಂಬ ನಿಯಮ ಮಾಡಿದ್ದೀರಿ. ಇದರ ಜೊತೆಗೆ ನಿಮಗೆ ಯಾರು ದೇಣಿಗೆ, ಚಂದಾ ಕೊಡುವುದಿಲ್ಲವೋ ಅವರ ಮೇಲೆ ಇಡಿ, ಐಟಿ ಎಂದು ದಾಳಿ ಮಾಡಿಸಿ ಹೆದರಿಸುತ್ತಿದ್ದೀರಿ. ವಿರೋಧ ಮಾಡಿದ ದೆಹಲಿ ಸಿಎಂ ಅವರನ್ನು ಬಂಧಿಸುವ ಮೂಲಕ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದೀರಿ. ಕಳೆದ ಹತ್ತು ವರ್ಷಗಳ ಬಿಜೆಪಿ ಸಾಧನೆ ಶೂನ್ಯ, ಸುಳ್ಳಿನಿಂದ ಕೂಡಿದ್ದು, ಬಿಗ್ ಝೀರೋ ಇದೆ. ಈ ಬಾರಿ ಬದಲಾವಣೆ ಖಚಿತ ಮೋದಿ ಮನೆಗೆ ಹೊಗೋದು ನಿಶ್ಚಿತವಾಗಿದೆ ಎಂದು ಹೇಳಿದರು.ರಾಹುಲ್ ಗಾಂಧಿ ಮದುವೆಯಾಗಲು ಯಾರೂ ಹೆಣ್ಣು ಕೊಡಲ್ಲ ಎಂದು ಬಿಜೆಪಿಯ ಸಿ.ಟಿ.ರವಿ ಹೇಳಿದ್ದಾರೆ, ಚುನಾವಣೆಯ ವೇಳೆ ಗಂಡು ಹೆಣ್ಣಿನ ವಿಚಾರ ಈಗ ಯಾಕೆ ಬಂತು?. ನಿಮ್ಮ ಮೋದಿ ಅವರು ಹೆಂಡತಿಗೆ ಸರಿಯಾದ ಗಂಡ ಆಗಲಿಲ್ಲ. ಅವರ ಪತ್ನಿ ಊರೂರು ಅಲೆಯುತ್ತಿದ್ದಾರೆ. ಮೋದಿ ಅವರು ಚೆನ್ನಾಗಿ ನೋಡಿಕೊಳ್ತಾರೆ ಎಂದು ಅವರ ಪತ್ನಿ ಭರವಸೆ ಇಟ್ಟಿದ್ದರು. ಇವರು ಅದನ್ನೂ ಮಾಡಿಲ್ಲ ಮೊದಲು ಅದನ್ನು ತಿಳಿದುಕೊಳ್ಳಿ ಎಂದು ಬಿಜೆಪಿಯ ಮುಖಂಡರಿಗೆ ತಿವಿದರು.
ಈ ವೇಳೆ ಕಾಂಗ್ರೆಸ್ ಮುಖಂಡರುಗಳಾದ ಮಹಾದೇವಿ ಗೋಕಾಕ, ಸುಭಾಷ ಕಾಲೇಬಾಗ, ವಸಂತ ಹೊನಮೊಡೆ, ಸತೀಶ ಅಡವಿ, ಬೀರಪ್ಪ ಜುಮನಾಳ ಉಪಸ್ಥಿತರಿದ್ದರು.