ಕನ್ನಡಪ್ರಭ ವಾರ್ತೆ ಹೊಸದುರ್ಗ 138 ವರ್ಷಗಳ ಕಾಲ ದೇಶದ ಹಿತಕ್ಕಾಗಿ ದುಡಿದವರು ಕಾಂಗ್ರೆಸ್ ಪಕ್ಷದವರು. ಸ್ವಾತಂತ್ರ್ಯಾನಂತರ ವಸತಿ, ಶಿಕ್ಷಣ, ಆರೋಗ್ಯ, ನೀರಾವರಿ, ಆಹಾರ ಭದ್ರತೆ ಮುಂತಾದ ಸವಲತ್ತುಗಳನ್ನು ಒದಗಿಸಿ ದೇಶಕ್ಕೆ ಭದ್ರ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಪಕ್ಷ. ಈ ಎಲ್ಲಾ ಸವಲತ್ತುಗಳನ್ನು ಅನುಭವಿಸಿದವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನೆಂದು ಪ್ರಶ್ನಿಸುತ್ತಾರೆ. ಹಾಗಾದರೇರೆ, ದೇಶದಲ್ಲಿ 9 ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸಾಧನೆ ಏನು? ಶ್ರೀಮಂತರ ಪರ ಆಡಳಿತ ನಡೆಸಿದ್ದೇ ಇವರ ದೊಡ್ಡ ಸಾಧನೆನಾ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಬಿಜೆಪಿ ವಿರುದ್ದ ಹರಿಹಾಯ್ದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಯುವ ಸಹಾಯ ಹಸ್ತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಾವೆಲ್ಲರೂ ರಾಮನವಮಿ ಆಚರಿಸುತ್ತೇವೆ. ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ. ಆದರೆ ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡವರಲ್ಲ ಎಂದು ವಾಗ್ದಾಳಿ ನಡೆಸಿದರು. ಮುಂಬರುವ ಲೋಕಸಭಾ ಚುನಾವಣೆಯು ನಮಗೆಲ್ಲಾ ದೊಡ್ಡ ಸವಲಾಗಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ವೀರ ಸೇನಾನಿ ಮಾದರಿಯಲ್ಲಿ ಹೋರಾಟ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಿಂತ ಹೆಚ್ಚು ಮತಗಳನ್ನು ಹಾಕಿಸಬೇಕು. ಹಸಿ ಸುಳ್ಳು ಹೇಳುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ದೇಶದ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷವನ್ನು ರಾಷ್ಟದ ಜನರು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತದಾರರಿಗೆ ಬಿಜೆಪಿ ದುರಾಡಳಿ ತದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಶ್ರೀರಾಮಚಂದ್ರನು ತನ್ನ ರಾಜ್ಯದ ಪ್ರಜೆಗಳೆಲ್ಲರೂ ಪ್ರೀತಿ, ವಾತ್ಸಲ್ಯದಿಂದ ಕ್ಷೇಮವಾಗಿರಬೇಕೆಂದು ಬಯಸಿ ಆಡಳಿತ ನೀಡಿದ್ದ. ಗೂಢಚಾರಿಗಳನ್ನು ಬಿಟ್ಟು ತನ್ನ ಆಡಳಿತದ ವೈಖರಿ ಕುರಿತು ತಿಳಿದುಕೊಳ್ಳುತ್ತಿದ್ದ. ಆದರೆ ರಾಮನ ಜಪ ಮಾಡುವ ಬಿಜೆಪಿಗರು ಕೇಂದ್ರದ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ವಿನಾಕಾರಣ ದಾಳಿ ನಡೆಸುತ್ತಿದ್ದಾರೆ. ರಾಮನ ಆಚರಣೆ ಮಾಡುವವರಿಗೆ ಆತ್ಮಶುದ್ಧಿ ಇರಬೇಕು ಎಂದು ಶಾಸಕ ಗೋವಿಂದಪ್ಪ ವಾಗ್ದಾಳಿ ನಡೆಸಿದರು.