ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ವಿರುದ್ಧ ಬಿಜೆಪಿ ನಾಯಕರ ಧರಣಿ

KannadaprabhaNewsNetwork |  
Published : Dec 13, 2024, 12:45 AM ISTUpdated : Dec 13, 2024, 07:56 AM IST
ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿರುವುದನ್ನು ಖಂಡಿಸಿ ಸುವರ್ಣ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಘಟನೆ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಸಮುದಾಯದವರ ಕ್ಷಮೆ ಕೋರಬೇಕು ಆಗ್ರಹಿಸಿದರು.

 ಸುವರ್ಣ ವಿಧಾನಸೌಧ : ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿರುವುದನ್ನು ಖಂಡಿಸಿ ಸುವರ್ಣ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಘಟನೆ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಸಮುದಾಯದವರ ಕ್ಷಮೆ ಕೋರಬೇಕು ಆಗ್ರಹಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಅರವಿಂದ ಬೆಲ್ಲದ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಆರ್‌. ಅಶೋಕ್‌ ಮಾತನಾಡಿ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಆಗಲು ಸಿದ್ದರಾಮಯ್ಯ ಅವರ ಕುತಂತ್ರವೇ ಕಾರಣ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣ ಅವರ ವಚನ ಹೇಳುವ ಸಿದ್ದರಾಮಯ್ಯ ಅವರು, ಬಸವಣ್ಣ ಅವರ ಅನುಯಾಯಿಗಳ ಮೇಲೆ ಲಾಠಿ ಚಾರ್ಜ್‌ ಮಾಡಿಸಿದ್ದಾರೆ. ವ್ಯವಸ್ಥಿತವಾಗಿ ಗಲಭೆ ಸೃಷ್ಟಿಸಲು, ಶಾಂತಿ ಕದಡಲು ಕಾಂಗ್ರೆಸ್‌ ಸರ್ಕಾರ ಈ ಕೃತ್ಯ ಎಸಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರ ಲಿಂಗಾಯತ ಸಮುದಾಯದ ಕ್ಷಮೆ ಕೇಳಬೇಕು. ಜತೆಗೆ ಈ ಘಟನೆ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೈಯಲ್ಲಿ ಶರಣು ಕಂಕಳಲ್ಲಿ ದೊಣ್ಣೆ ಎನ್ನುವಂತಿದೆ ಸಿದ್ದರಾಮಯ್ಯ ಅವರ ವರ್ತನೆ. ನಿಜಲಿಂಗಪ್ಪ ಅವರ ಕಾಲದಿಂದಲೂ ಕಾಂಗ್ರೆಸ್‌ ಲಿಂಗಾಯತ ಸಮುದಾಯದ ಬಗ್ಗೆ ದ್ವಂದ್ವ ನೀತಿ ಅನುಸರಿಸುತ್ತಾ ಬಂದಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಸಮುದಾಯವನ್ನು ಒಡೆಯುವ ಕೆಲಸ ಮಾಡಿದ್ದರು. ಜನರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಲಾಠಿ ಚಾರ್ಜ್‌ನಿಂದ ಹೋರಾಟಗಾರರಿಗೆ ರಕ್ತಸ್ರಾವವಾಗಿ ಐಸಿಯುನಲ್ಲಿ ಇಡಲಾಗಿದೆ. ಅವರನ್ನು ಈಗ ಆಸ್ಪತ್ರೆಯಿಂದ ಅಪಹರಿಸಲಾಗಿದೆ. ಧರ್ಮ-ಜಾತಿಗಳ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ. ಲಿಂಗಾಯತ ಸಮುದಾಯದ ವಿರುದ್ಧ ಹಿಂದುಳಿದ ವರ್ಗದವರನ್ನು ಎತ್ತಿ ಕಟ್ಟಲಾಗುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಯೋಗ್ಯರಾ ಎಂಬ ಅನುಮಾನ ಮೂಡುತ್ತಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ