ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದ ಇತಿಹಾಸದಲ್ಲಿ ಕೊಂಡಿ ಮಂಚಣ್ಣ ಬಳಿಕ ಸಿದ್ದರಾಮಯ್ಯ ಸರ್ಕಾರ ಲಿಂಗಾಯತರ ಮೇಲೆ ಹಲ್ಲೆ ನಡೆಸಿದೆ. ಇಂತಹ ಬೆದರಿಕೆಗೆ ಸಮಾಜ ಹಿಂಜರಿಯಲ್ಲ. ಹೋರಾಟ ಮತ್ತಷ್ಟು ತೀವ್ರಗೊಳಿಸಿ ಲಾಠಿ ಏಟಿಗೆ ವೋಟಿನ ಏಟು ನೀಡಲಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಗುರುವಾರ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಹೆದ್ದಾರಿ ತಡೆ ನಡೆಸಿ ಅವರು ಮಾತನಾಡಿದರು. ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಉದ್ದೇಶದಿಂದಲೇ ಸರ್ಕಾರ ಷಡ್ಯಂತ್ರ ರೂಪಿಸಿ ಗಲಭೆ ಮಾಡಿಸಿದೆ. ಲಿಂಗಾಯತ ವಿರೋಧಿ ಅಧಿಕಾರಿಗಳ ಮೂಲಕ ಹೋರಾಟಗಾರರ ಮೇಲೆ ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ದೂರಿದರು.ಮೂರು ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿ ಮುಂಬರುವ ಚುನಾವಣೆಯಲ್ಲಿ ಲಿಂಗಾಯತ ವಿರೋಧಿ ಸರ್ಕಾರವನ್ನು ಕಿತ್ತೆಸೆದು, ನಮ್ಮ ಸಮಾಜದ ಪರ ಕಾಳಜಿ ಹೊಂದಿರುವ, ಸಮಾಜಕ್ಕೆ ಗೌರವ ಕೊಡುವ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದರು.ಹೃದಯಹೀನ ಮುಖ್ಯಮಂತ್ರಿ:
ಪೊಲೀಸರು ಹೋರಾಟಗಾರರನ್ನು ದನ ಬಡಿದಂತೆ ಬಡಿಯುತ್ತಿದ್ದಾಗ ನಮ್ಮ ಸಮಾಜದ ಶಾಸಕರೊಬ್ಬರು ಸಿಎಂ ಬಳಿಗೆ ಹೋಗಿ ದಯವಿಟ್ಟು ಹೊಡೆಯುವುದನ್ನು ನಿಲ್ಲಿಸಲು ಹೇಳಿ ಎಂದು ಕೇಳಿಕೊಂಡಿದ್ದಾರೆ. ಆಗ ಸಿಎಂ ಅವರು ಹೊಡಿಲಿ ಬಿಡ್ರಿ ಅವ್ರನ್ನ, ನಮ್ಮನ್ನ ಹೆದರಿಸಲು ನೋಡ್ತಾರ ಎಂದು ಹೃದಯಹೀನರಾಗಿ, ದುರಹಂಕಾರದಿಂದ ವರ್ತಿಸಿದ್ದಾರೆ. ಇದಕ್ಕೆ ವಿಧಾನಸೌಧದ ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿಯಾಗಿವೆ ಎಂದರು.ನಿಮ್ಮ ಸಮುದಾಯದ ಶಾಸಕರೊಬ್ಬರು ಲಾಠಿ ಪ್ರಹಾರದ ರೂವಾರಿಯಾಗಿದ್ದಾರೆಂಬ ಆರೋಪ ಇದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಬಸವಣ್ಣನವರ ಕಾಲದಿಂದಲೂ ಮಲ್ಲಪ್ಪಶೆಟ್ಟಿಯಂಥವರು ಇದ್ದಾರೆ. ಆದರೂ ಹೋರಾಟದಲ್ಲಿ ಪಾಲ್ಗೊಳ್ಳದ ಸಮಾಜದ ಶಾಸಕರು, ಸಚಿವರನ್ನು ನಾವು ಕ್ಷಮಿಸುತ್ತೇವೆ. ಹೋರಾಟದಲ್ಲಿ ಪಾಲ್ಗೊಳ್ಳದಿದ್ದರೂ ಕೊನೆಯ ಪಕ್ಷ ಸದನದಲ್ಲಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿ. ಸಮಾಜದ ಅನ್ನ ತಿಂದು, ಸಮಾಜದಲ್ಲಿ ಹುಟ್ಟಿ, ಸಮಾಜದಿಂದಲೇ ಶಾಸಕ, ಸಚಿವರಾಗಿ ಅಧಿಕಾರ ಅನುಭವಿಸುತ್ತಿರುವವರು ಅದರ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.ಸಚಿವ ಸ್ಥಾನಕ್ಕಾಗಿ ನಮ್ಮ ಸಮಾಜದ ಶಾಸಕರೊಬ್ಬರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪ ಮಾಡಿದ ಶ್ರೀಗಳು, ನಾನು ಅವರು ಯಾರೆಂದು ಹೆಸರು ಹೇಳುವುದಿಲ್ಲ. ಹೆಸರು ಹೇಳಿ ನನ್ನ ನಾಲಿಗೆಯನ್ನು ಹೊಲಸು ಮಾಡಿಕೊಳ್ಳುವುದಿಲ್ಲ. ಅವರು ಲಾಠಿಚಾರ್ಜ್, ಗೋಲಿಬಾರ್ ಕೂಡ ಮಾಡಿಸಲಿ. ಸಚಿವ ಸ್ಥಾನ ಪಡೆದುಕೊಂಡು ಆರಾಮಾಗಿರಲಿ. ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ನಮಗಿದೆ ಎಂದರು.ಮೀಸಲಾತಿ ಕೊಡುವುದಿಲ್ಲ ಎಂದು ಘೋಷಿಸಲಿ:ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಲ್ಲ ಎಂದು ಘೋಷಣೆ ಮಾಡಲಿ. ಅವರನ್ನು ಏನೂ ಕೇಳುವುದಿಲ್ಲ. ಅವರ ಜೊತೆಗೆ ಮಾತನಾಡುವುದು ಇಲ್ಲ. ಆದರೆ, ಅದನ್ನು ಬಿಟ್ಟು ಈ ರೀತಿಯಾಗಿ ಸಮಾಜದವರನ್ನು ಹಿಂಸಿಸಿ, ಬಲಪ್ರಯೋಗ ಮಾಡುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ. ಮಾನವ ಹಕ್ಕುಗಳ ವಿರೋಧಿ ನಡೆಯಾಗಿದೆ ಎಂದು ಟೀಕಿಸಿದರು.ಪ್ರತಿಭಟನೆಯಲ್ಲಿ ಮಾಜಿ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಅಡಿವೇಶ ಇಟಗಿ ಸೇರಿದಂತೆ ಹಲವಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.ರಸ್ತೆ ತಡೆದು ಶ್ರೀಗಳ ಪ್ರತಿಭಟನೆ:
ಇದಕ್ಕೂ ಮೊದಲು ಕೂಡಲ ಶ್ರೀಗಳ ನೇತೃತ್ವದಲ್ಲಿ ಹೋರಾಟಗಾರರು ಟೋಲ್ ನಾಕಾ ಬಳಿ ಹೆದ್ದಾರಿ ಮೇಲೆ ಕುಳಿತು ಕೆಲಕಾಲ ರಸ್ತೆ ತಡೆ ನಡೆಸಿದರು. ಇದರಿಂದ ಕೆಲ ಗಂಟೆ ಕಾಲ ರಸ್ತೆ ಸಂಚಾರ ವ್ಯತ್ಯಯ ಉಂಟಾಯಿತು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಾಮೀಜಿ ಬಳಿಗೆ ಬಂದು ರಸ್ತೆ ತಡೆಯಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಆ್ಯಂಬುಲೆನ್ಸ್‌ಗಳು ಸಿಕ್ಕಿಕೊಂಡಿವೆ. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರಿಂದ ಇದಕ್ಕೆ ಸ್ಪಂದಿಸಿದ ಸ್ವಾಮೀಜಿ ಹೋರಾಟ ನಿಲ್ಲಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.