ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ । ಹಲವು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು । ಪ್ರತ್ಯೇಕ ದೇಶ ಹೇಳಿಕೆಗೆ ಖಂಡನೆ
ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಮಾಡಬೇಕೆನ್ನುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೋಮವಾರ ಜಿಲ್ಲೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಒಳ ಹೋಗಲು ಯತ್ನಿಸುವ ವೇಳೆ ತಡೆದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ವಾಹನಕ್ಕೆ ಎಳೆದೊಯ್ಯುವ ವೇಳೆ ಅನೇಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆಯಿತು.
ಕಾಂಗ್ರೆಸ್ ಸಂಸದರ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಮೊದಲು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬಂದು ಡಿ.ಕೆ. ಸುರೇಶ್ ವಿರುದ್ಧ ಧಿಕ್ಕಾರ ಕೂಗಿ ಉಪವಿಭಾಧಿಕಾರಿ ಮಾರುತಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಅಲ್ಲಿಂದ ಬಿ.ಎಂ. ರಸ್ತೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಮೆರವಣಿಗೆ ಮೂಲಕ ಬರುವ ಮೊದಲೇ ಪೊಲೀಸರು ಕಾಂಗ್ರೆಸ್ ಕಚೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿದ್ದಲ್ಲದೇ ಬ್ಯಾರಿಕೇಡ್ ಹಾಕಿ ತಡೆ ಒಡ್ಡಿದ್ದರು.ಇದನ್ನು ಲೆಕ್ಕಿಸದೇ ಬಿಜೆಪಿ ಕಾರ್ಯಕರ್ತರು ಒಳ ನುಗ್ಗಲು ಯತ್ನಿಸಿದ ವೇಳೆ ಕೆಲ ಸಮಯ ಪೊಲೀಸರೊಂದಿಗೆ ತಿಕ್ಕಾಟ ನಡೆಯಿತು. ನಂತರದಲ್ಲಿ ಪೊಲೀಸರು ಬಿಜೆಪಿಯ ಕಾರ್ಯಕರ್ತರನ್ನು ಎಳೆದೊಯ್ದು ಪೊಲೀಸ್ ವಾಹನಕ್ಕೆ ತುಂಬಿಕೊಂಡರು. ಸುಮಾರು ೨೦ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ವಸತಿಗೃಹಕ್ಕೆ ಕರೆದೊಯ್ದರು. ಬಲವಂತವಾಗಿ ಪೊಲೀಸರು ಎಳೆದೊಯ್ದಿದ್ದರಿಂದ ಅನೇಕ ಬಿಜೆಪಿ ಕಾರ್ಯಕರ್ತರ ಕುತ್ತಿಗೆ, ಭುಜ, ಕೈ ಇತರೆ ಭಾಗಗಳಿಗೆ ಸಣ್ಣ ಪುಟ್ಟ ಗಾಯಗಳಾದವು.
‘ಅದೇ ಮನಸ್ಥಿತಿಯಲ್ಲಿ ಜವಾಬ್ದಾರಿಯುತ ಸಂಸದರಾಗಿ ಡಿ.ಕೆ. ಸುರೇಶ್ ಅವರು ಇಂತಹ ಹೇಳಿಕೆ ಕೊಟ್ಟಿದ್ದಾರೆ. ಕೇಂದ್ರದಿಂದ ನರೇಂದ್ರ ಮೋದಿಯವರು ಕೊಟ್ಟಿರುವ ಅನುದಾನದಲ್ಲಿ ತಾರತಮ್ಯ ಆಗಿದೆ ಎಂದು ಹೇಳಿರುವುದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಕೇಂದ್ರದಿಂದ ರಸ್ತೆ, ರೈಲ್ವೆ ಕಾಮಗಾರಿ, ವಿಮಾನ ನಿಲ್ದಾಣದ ಅಭಿವೃದ್ಧಿ ಸೇರಿದಂತೆ ಅನುದಾನದಲ್ಲಿ ಯಾವುದೇ ತಾರತಮ್ಯವಾಗಿರುವುದಿಲ್ಲ. ಆದರೆ ದೇಶವನ್ನು ಒಡೆಯುವ ಹೇಳಿಕೆ ನೀಡಿರುವುದನ್ನು ಬಿಜೆಪಿ ಯುವ ಮೋರ್ಚಾ ತೀವ್ರ ರೀತಿಯಲ್ಲಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಬಿಜೆಪಿ ಇನ್ನಷ್ಟು ಹೋರಾಟ ಮಾಡಲಿದೆ. ಇಂತಹ ಹೇಳಿಕೆ ನೀಡಿರುವ ಸಂಸದರನ್ನು ತಕ್ಷಣ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನೂಪ್, ಮುಖಂಡರಾದ ರಾಕೇಶ್, ರಘು, ಗಿರೀಶ್, ರಾಜೇಶ್, ಮುರುಳಿ, ವಿನೋದ್ ಕುಟ್ಟಿ, ತೇಜಸ್, ವಿಜಯಲಕ್ಷ್ಮಿ, ರತ್ನ ಪ್ರಕಾಶ್, ಶೋಭಾ ಉಪಸ್ಥಿತರಿದ್ದರು.ಯುವ ಮೋರ್ಚಾ ಅಧ್ಯಕ್ಷರ ಚಿನ್ನದ ಸರ ಕಾಣೆ
ಪೊಲೀಸರು ಎಳೆದೊಯ್ಯುವಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನೂಪ್ ಅವರು ಕೈಗೆ ಹಾಕಿದ್ದ ೩೫ ಗ್ರಾಂ ಚಿನ್ನದ ಸರ ಕಾಣೆಯಾಯಿತು. ನಂತರ ಪ್ರತಿಭಟನೆ ನಡೆದ ಜಾಗದಲ್ಲಿ ಕೆಲ ಸಮಯ ಹುಡುಕಿದರೂ ಸಿಗಲಿಲ್ಲ. ಸಲ್ಪ ಸಮಯದಲ್ಲಿ ಪೊಲೀಸ್ ವಾಹನದಲ್ಲಿ ಕೆಳಗೆ ಬಿದ್ದಿರುವುದು ತಿಳಿದು ಬಂದಿತು. ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಹಿಡಿದು ಎಳೆದುಕೊಂಡು ಹೋಗುವಾಗ ಕೆಳಗೆ ಬಿದ್ದಿದೆ ಎಂದು ಹೇಳಲಾಗಿದೆ.ಪ್ರತಿಭಟನಾಕಾರರನ್ನು ಬಂಧಿಸಿ ಎಳೆದೊಯ್ಯುತ್ತಿರುವ ಪೊಲೀಸರು.