ಸರ್ಕಾರಿ ಸಂಸ್ಥೆಗಳಿಂದಲೇ ಎಫ್‌ಎಸ್‌ಎಸ್‌ಎಐನಿಯಮ ಉಲ್ಲಂಘನೆ, ಅಧಿಕಾರಿಗಳು ಮೌನ

KannadaprabhaNewsNetwork | Updated : Feb 06 2024, 01:31 AM IST

ಸಾರಾಂಶ

ಪಡಿತರ ಸಾಮಗ್ರಿ ದಾಸ್ತಾನು ಇಡುವ, ಮಾರಾಟ ಮಾಡುವ, ಆಹಾರ ತಯಾರಿಸುವ ಬಹುತೇಕ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಪಡೆದಿಲ್ಲ.

ಜಿ.ಡಿ. ಹೆಗಡೆ

ಕಾರವಾರ:

ಪಡಿತರ ಸಾಮಗ್ರಿ ದಾಸ್ತಾನು ಇಡುವ, ಮಾರಾಟ ಮಾಡುವ, ಆಹಾರ ತಯಾರಿಸುವ ಬಹುತೇಕ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪಡೆದಿಲ್ಲ. ಸ್ಥಳೀಯ ಪ್ರಾಧಿಕಾರ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.ಬಿಸಿಯೂಟ ವಿತರಿಸುವ ಶಾಲೆಗಳು, ಅಂಗನವಾಡಿಗಳು, ವಿದ್ಯಾರ್ಥಿ ವಸತಿ ನಿಲಯಗಳು, ನ್ಯಾಯಬೆಲೆ ಅಂಗಡಿಗಳು ಒಳಗೊಂಡು ಸಾರ್ವಜನಿಕವಾಗಿ ಆಹಾರ ವಿತರಿಸುವ, ದಾಸ್ತಾನು ಮಾಡುವ, ತಯಾರಿಸುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದಿರಬೇಕು ಎಂಬ ನಿಯಮವೇ ಇದೆ.

ಆದರೆ ಹಲವು ಆಹಾರ ಮತ್ತು ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ ನಿಯಮ ಗಾಳಿಗೆ ತೂರಿವೆ. ಬಹುತೇಕ ಅಂಗನವಾಡಿಗಳು, ಸರ್ಕಾರಿ ಪ್ರಾಥಮಿಕ ಶಾಲೆಗಳು ಪರವಾನಗಿ ಪಡೆಯುವ ಅಥವಾ ನವೀಕರಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿಲ್ಲ. ಎಫ್‌ಎಸ್‌ಎಸ್‌ಎಐ ಕೂಡಾ ಇಂತಹ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸುವ ಬದಲು ಕಣ್ಮುಚ್ಚಿ ಕುಳಿತಿದೆ.ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರ ಬಂದಾಗ ಹೋಟೆಲ್, ರೆಸ್ಟೋರೆಂಟ್, ಬೇಕರಿ ಮೊದಲಾದವನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ತಪ್ಪಾಗಿದ್ದರೆ ದಂಡ ವಿಧಿಸುವ ಕೆಲಸವನ್ನು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ ಅಂಗನವಾಡಿ ಕೇಂದ್ರಗಳಿಂದ ಹಿಡಿದು ನ್ಯಾಯಬೆಲೆ ಅಂಗಡಿ, ದಾಸ್ತಾನು ಕೇಂದ್ರದ ವರೆಗೆ ಆಹಾರ ತಯಾರಿಸುವ, ವಿತರಿಸುವ, ಸಂಗ್ರಹಿಸಿಡುವ ಎಲ್ಲ ಸಂಸ್ಥೆಗಳ ಬಗ್ಗೆ ನಿಗಾ ಇಡುವ ಕೆಲಸವನ್ನು ಅಧಿಕಾರಿಗಳು ಮರೆತಿದ್ದಾರೆ. ಎಷ್ಟು ಅಂಗನವಾಡಿ, ಸರ್ಕಾರಿ ಶಾಲೆ, ವಸತಿ ನಿಲಯ, ನ್ಯಾಯ ಬೆಲೆ ಅಂಗಡಿ ಬಳಿ ಪರವಾನಗಿ ಇದೆ ಎನ್ನುವ ಮಾಹಿತಿ ಸ್ಥಳೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಬಳಿ ಇಲ್ಲ.ಪರವಾನಗಿ ಪಡೆದಿರಬೇಕು ಎನ್ನುವ ಬಗ್ಗೆ ಬಹುತೇಕ ಅಂಗನವಾಡಿ, ಸರ್ಕಾರಿ ಶಾಲೆ, ವಿದ್ಯಾರ್ಥಿ ವಸತಿ ನಿಲಯದ ಮುಖ್ಯಸ್ಥರಿಗೆ ಈ ನಿಯಮದ ಬಗ್ಗೆ ಅರಿವು ಸಹ ಇಲ್ಲ. ಊಟದಲ್ಲಿ ಕಲುಷಿತ ಪದಾರ್ಥ ಸೇರಿ ಮಕ್ಕಳು ಅಸ್ವಸ್ಥರಾದ ಪ್ರಕರಣಗಳು ನಡೆದಾಗ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತಿದೆ. ಇನ್ನು ಕೆಲವು ಶಾಲೆ, ಅಂಗನವಾಡಿಗಳ, ವಿದ್ಯಾರ್ಥಿ ವಸತಿ ನಿಲಯಗಳಿಗೆ ಪ್ರಾಧಿಕಾರದ ಪರವಾನಗಿ ಪಡೆಯುವ ಬಗ್ಗೆ ಅರಿವಿದ್ದರೂ ಸರ್ಕಾರದಿಂದ ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡದ ಕಾರಣ ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ನಿಯಮ ರೂಪಿಸಿದ ಸರ್ಕಾರವೇ ಅನುದಾನ ನೀಡಿದೇ ಇರುವುದು ಹಾಗೂ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮವಹಿಸಿದೇ ಇರುವುದು ಕಾನೂನು ಗಾಳಿಗೆ ತೋರಲು ಸಹಕಾರ ನೀಡಿದಂತಾಗಿದೆ.ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಪ್ರಕಾರ ಸರ್ಕಾರಿ, ಸರ್ಕಾರೇತರ ಸಂಸ್ಥೆ ಆಹಾರ ತಯಾರಿಸುವ, ಮಾರಾಟ ಮಾಡುವ, ದಾಸ್ತಾನು ಮಾಡುವ ಬಗ್ಗೆ ಪರವಾನಗಿ ಪಡೆಯಬೇಕು. ನಮ್ಮ ಜಿಲ್ಲೆಯಲ್ಲಿ ಕೂಡಾ ಆಹಾರ ತಯಾರಿಸುವ ಹಲವು ಸರ್ಕಾರಿ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಪಡೆದಿಲ್ಲ. ಸಭೆಗಳಲ್ಲಿ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಅನುಮತಿ ಪಡೆಯುವಂತೆ ಸೂಚಿಸಿದ್ದೇವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂಕಿತಾಧಿಕಾರಿ ರಾಜಶೇಖರ ತಿಳಿಸಿದ್ದಾರೆ.

ಹೋಟೆಲ್, ಬೇಕರಿ ಮಾತ್ರವಲ್ಲದೆ ವಿದ್ಯಾರ್ಥಿ ವಸತಿ ನಿಲಯಗಳು, ಅಂಗನವಾಡಿ, ಬಿಸಿಯೂಟದ ಶಾಲೆಗಳು, ಪಡಿತರ ಅಂಗಡಿಗಳು ಸಹ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಲೈಸೆನ್ಸ್ ಪಡೆಯದ ಮತ್ತು ಸುರಕ್ಷತೆ ಹಾಗೂ ಗುಣಮಟ್ಟದ ನಿಯಮ ಉಲ್ಲಂಘನೆಯಾದರೆ ಸಂಬಂಧಪಟ್ಟವರ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆಯಡಿ ದಂಡ, ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

Share this article