)
- ಜನರಿಗೆ ಬೆಲೆ ಏರಿಕೆಯ ಬರೆ: ದಕ್ಷಿಣ ಕ್ಷೇತ್ರ ಬಿಜೆಪಿ ಮುಖಂಡರ ಆಕ್ರೋಶ - - -
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ಬೆಲೆ ಏರಿಕೆ ನೀತಿ ಖಂಡಿಸಿ ದಕ್ಷಿಣ ಕ್ಷೇತ್ರದ ಬಿಜೆಪಿ ಮಂಡಲದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನ ಬಳಿಯಿಂದ ಪಕ್ಷದ ರಾಜ್ಯ, ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಸಾಗಿ, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಘೋಷಣೆ ಕೂಗುತ್ತಾ ಎಸ್‌ಕೆಪಿ ರಸ್ತೆ, ದೊಡ್ಡಪೇಟೆ, ವಿಜಯಲಕ್ಷ್ಮಿ ರಸ್ತೆ, ಗಡಿಯಾರ ಕಂಬ ಹಾದು ತಾಲೂಕು ಕಚೇರಿ ತಲುಪಿ, ತಹಸೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.ರಾಜ್ಯ ಉಪಾಧ್ಯಕ್ಷ ಬಸವರಾಜ ಕೇಲಗಾರ ಮಾತನಾಡಿ, ಹಾಲು, ಮೊಸರು, ತುಪ್ಪದ ಬೆಲೆ ಹೆಚ್ಚಳ, ಕೆಎಸ್ಸಾರ್ಟಿಸಿ ಬಸ್ಸು ಪ್ರಯಾಣ ದರ ಹೆಚ್ಚಳ ಹೀಗೆ ಎಲ್ಲದರಲ್ಲೂ ದರ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ. ಅಭಿವೃದ್ಧಿ ಕಾರ್ಯಕ್ಕೆ ನಯಾ ಪೈಸೆ ನೀಡದೇ ವ್ಯರ್ಥ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿ ಕುಳಿತಿದೆ ಎಂದರು.
ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಮಾತನಾಡಿ, ಹಾಲು, ಮೊಸರು, ತುಪ್ಪದ ಬೆಲೆ ಹೆಚ್ಚಿಸಿದ, ಬಸ್ ಪ್ರಯಾಣ ದರ ಏರಿಸಿದ ಕಾಂಗ್ರೆಸ್ ಸರ್ಕಾರ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನಸಾಮಾನ್ಯರ ಮೇಲೆ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಹೇರಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮುಂದಾಗಬೇಕು. ಈಗಾಗಲೇ ಕಾಂಗ್ರೆಸ್ಸಿನ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ. ಈಗ ಬೆಲೆ ಏರಿಕೆ ಬರೆ ಹಾಕುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದೆ ಎಂದು ದೂರಿದರು.
ಮಾಜಿ ಮೇಯರ್ ಬಿ.ಜೆ. ಅಜಯಕುಮಾರ ಮಾತನಾಡಿ, ಬಡರೈತರಿಗೆ ಹಾಲಿನ ಸಬ್ಸಿಡಿ ನೀಡಲು ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲಿನ ದರ ಹೆಚ್ಚಿಸಿರುವುದಾಗಿ ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿರುವುದು ಹೊಣೆಗೇಡಿತನದ ಹೇಳಿಕೆಯಾಗಿದೆ. ಹೈನುಗಾರಿಕೆ ಮಾಡುವ ರೈತರಿಗೆ ಸರ್ಕಾರ ತನ್ನ ಬೊಕ್ಕಸದಿಂದಲೇ ಸಬ್ಸಿಡಿ ನೀಡುವ ಮೂಲಕ ಹೈನುಗಾರಿಕೆ ಅವಲಂಭಿತ ರೈತರ ನೆರವಿಗೆ ಧಾವಿಸಬೇಕು. ಬೆಲೆ ಏರಿಕೆ ನೀತಿ, ಭ್ರಷ್ಟಾಚಾರದಲ್ಲಿಯೇ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
- - -