ಕನ್ನಡಪ್ರಭ ವಾರ್ತೆ ಹಳಿಯಾಳ
ಪಟ್ಟಣದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗೋರಕ್ಷಾ ವಿಭಾಗದವರು ತಾಲೂಕಾಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿಯವರಿಗೆ ಮನವಿ ಸಲ್ಲಿಸಿದರು. ಮಸೂದೆ ತಿದ್ದುಪಡಿ ಕೈಬಿಡಬೇಕು ಹಾಗೂ ಈ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜಾನುವಾರುಗಳನ್ನು ಕ್ರೂರವಾಗಿ ಒಂದರ ಮೇಲೋಂದರಂತೆ ತುಂಬಿ ದುಡ್ಡಿಗಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. 2021ರಲ್ಲಿ ಗೋ ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದ ನಂತರ ಈ ಅಕ್ರಮ ಸಾಗಾಟದ ಸಂಖ್ಯೆಯಲ್ಲಿ ಬಾರಿ ಇಳಿಮುಖವಾಗಿರುತ್ತದೆ. ಆದರೂ ಇನ್ನೂವರೆಗೂ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದೇ ಇರುವುದರಿಂದ ಹಲವು ಕಡೆ ವಾಹನ ಮಾಲಕರು ಕ್ರೂರವಾಗಿ ಜಾನುವಾರುಗಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿರುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಈ ಅಕ್ರಮ ಸಾಗಾಟ ನಿಯಂತ್ರಿಸಬೇಕಾದರೇ ಗೋಹತ್ಯೆ ಪ್ರತಿಬಂಧಕ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಹೇಳಿದ್ದಾರೆ.ಈ ಕಾಯಿದೆಯು ಜಾನುವಾರುಗಳ ವಧೆಯನ್ನು ನಿಯಂತ್ರಿಸುವುದರ ಜೊತೆಯಲ್ಲಿ ಸಂರಕ್ಷಣಾ ಮಸೂದೆಯು ಆಗಿರುತ್ತದೆ. ಆದರೆ ರಾಜ್ಯ ಸರ್ಕಾರ ಮಸೂದೆಗೆ ತಿದ್ದುಪಡಿ ಮಾಡುವ ಮೂಲಕ ಜಾನುವಾರು ಅಕ್ರಮ ಸಾಗಾಟಗಾರರಿಗೆ ಹಾಗೂ ಗೋ ಹಂತಕರಿಗೆ ಅನುಕೂಲ ಮಾಡಿಸಲು ಹೊರಟಿದೆ. ಗೋಹತ್ಯೆ ಮಾಡುವವರಿಗೆ ನಿರ್ಭಯ ಕೊಡುವಂತಹ ಈ ಕಾಯ್ದೆಯು ಸಂವಿಧಾನ ವಿರೋಧಿಯಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಮ್ಮ ಸಂವಿಧಾನದತ್ತವಾದ ಅಧಿಕಾರಿ ಬಳಸಿ ಈ ಮಸೂದೆಯನ್ನು ಸದನದಲ್ಲಿ ತಿದ್ದುಪಡಿಗೆ ಅವಕಾಶ ನೀಡಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ವಿಎಚ್‌ಪಿ ತಾಲೂಕು ಅಧ್ಯಕ್ಷ ಶ್ರೀಪತಿ ಭಟ್, ಕಾರ್ಯದರ್ಶಿ ನಿಖಿಲ್ ತೊರ್ಲೆಕರ್, ನಿಖಿಲ್ ಗಿಂಡೆ, ಬಿಜೆಪಿ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ ಇನ್ನು ಹಲವರು ಇದ್ದರು.