ಎಂಎಲ್‌ಸಿ ಸಿಟಿ ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Dec 21, 2024 1:18 AM

ಸಾರಾಂಶ

ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮೇಲೆ ಕಾಂಗ್ರೆಸ್ ಸರ್ಕಾರ ಗೂಂಡಾಗಿರಿ ಪ್ರದರ್ಶನ ಮಾಡಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾಡಿರುವ ಹಲ್ಲೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮೇಲೆ ಕಾಂಗ್ರೆಸ್ ಸರ್ಕಾರ ಗೂಂಡಾಗಿರಿ ಪ್ರದರ್ಶನ ಮಾಡಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ನಗರದ ಅಂಬೇಡ್ಕರ್‌ ಪ್ರತಿಮೆ ಎದುರು ಜಮಾಯಿಸಿ ಮೊದಲು ಅಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಮುಖಂಡ ಅಮಿತ್ ಶೆಟ್ಟಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾಡಿರುವ ಹಲ್ಲೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು. ಸಿಟಿ ರವಿ ಅವರ ಮೇಲೆ ಆರೋಪ ಬಂದ ಮೇಲೆ ಅದನ್ನು ಸಮಗ್ರವಾಗಿ ತನಿಖೆ ಮಾಡಿ ಬಂಧನ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಏಕಾಏಕಿ ಅವರನ್ನು ಬಂಧಿಸಿ ಕಿರುಕುಳ ನೀಡಿದ್ದಾರೆ. ಅಲ್ಲದೆ ಅವರ ಮೇಲೆ ಹಲ್ಲೆ ನಡೆದು ರಕ್ತಸ್ರಾವ ಆಗುತ್ತಿದ್ದಾಗಲೂ ಅವರಿಗೆ ಚಿಕಿತ್ಸೆ ಕೊಡಿಸದೆ ಅವರನ್ನು ಬಂಧನ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಗಳ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ, ಅಲ್ಲದೆ ಸಿದ್ದರಾಮಯ್ಯನವರ ಮೇಲೆ ಅನೇಕ ಆರೋಪಗಳು ಬಂದರೂ ಅವುಗಳನ್ನು ತನ್ನ ಅಧಿಕಾರ ಬಳಸಿಕೊಂಡು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಇಂತಹ ಜನಪ್ರತಿನಿಧಿಗಳ ಮೇಲೆ ಈ ರೀತಿ ದೌರ್ಜನ್ಯವಾದರೆ ಸಾಮಾನ್ಯ ಜನರ ಗತಿ ಏನು ಎಮದು ಪ್ರಶ್ನೆ ಮಾಡಿದರು.

ಈ ವೇಳೆ ಬಿಜೆಪಿ ಮುಖಂಡರಾದ ಗಿರೀಶ್, ವೇಣು ಗೋಪಾಲ್, ಮಾಜಿ ನಗರಸಭಾ ಅಧ್ಯಕ್ಷ ಆರ್‌.ಮೋಹನ್, ಚಂದ್ರಕಲಾ, ಶೋಭಾ, ಇತರರು ಇದ್ದರು.

Share this article