ಕನಕಗಿರಿ:
ಮುಸ್ಲಿಂ ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ ನೀಡಲು ಸಂವಿಧಾನದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ನೀಡಿದ್ದು ಇದು ಖಂಡನೀಯ ಎಂದು ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನದಲ್ಲಿ ಎಲ್ಲ ವರ್ಗಕ್ಕೂ ಸಮಪಾಲ ನೀಡಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ ಸಂವಿಧಾನದಲ್ಲಿ ಮುಸಲ್ಮಾನರಿಗೆ ಪ್ರತ್ಯೇಕ ಮೀಸಲಾತಿ ನೀಡುತ್ತೇವೆ ಎಂದು ಹೇಳಿರುವುದು ಖಂಡನೀಯ. ಬಿಜೆಪಿ ಸಂವಿಧಾನದ ಅಡಿ ಕೆಲಸ ಮಾಡುತ್ತಿದ್ದರಿಂದ ದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು ಜನಪರ ಕೆಲಸ ಮಾಡುತ್ತಿದೆ. ಆದರೆ, ಡಿಸಿಎಂ ಇಂತಹ ಅಸಂವಿಧಾನಿಕ ಹೇಳಿಕೆ ನೀಡುವ ಮೂಲಕ ವಿವಿಧ ತಳ ಸಮುದಾಯಗಳ ಅಭಿವೃದ್ಧಿಗೆ ಕೊಕ್ಕೆ ಹಾಕಲು ಹೊರಟಿದ್ದಾರೆ. ಇದನ್ನು ರಾಜ್ಯದ ಜನ ಸಹಿಸುವುದಿಲ್ಲ. ಮುಂಬರುವ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆ ಎಂದರು.
ಮುಖಂಡ ಮಹಾಂತೇಶ ಸಜ್ಜನ್ ಮಾತನಾಡಿ, ಅನಂತಕುಮಾರ ಹೆಗಡೆ ಸಚಿವರಾಗಿದ್ದ ವೇಳೆ ಕುಕನೂರಿಗೆ ಬಂದಾಗ ಸಂವಿಧಾನದಲ್ಲಿ ಬಹಳಷ್ಟು ತಿದ್ದುಪಡಿ ಆಗಬೇಕಾಗಿದೆ. ದೇಶದ ಜನಸಂಖ್ಯಾ ಆಧಾರಿತ ತಿದ್ದುಪಡಿ ಆಗಬೇಕಿದೆ ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪ್ತಿ ಪ್ರತಿಭಟಿಸಿತ್ತು. ಇದೀಗ ಕಾಂಗ್ರೆಸ್‌ನ ಡಿಸಿಎಂ ಡಿ.ಕೆ ಶಿವಕುಮಾರ ಮುಸ್ಲಿಂಮರಿಗೆ ಪ್ರತ್ಯೇಕ ಮೀಸಲಾತಿ ನೀಡುವ ವಿಚಾರ ಹೇಳಿದ್ದಾರೆ. ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿರುವವರಿಗೆ ಬೆಂಬಲಿಸುವ ಕಾಂಗ್ರೆಸ್ ತನ್ನ ನೈತಿಕತೆ ಕಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಡಿವಾಳ ಮಾಚಿದೇವ ವೃತ್ತದ ಮಾರ್ಗವಾಗಿ ವಾಲ್ಮೀಕಿ ವೃತ್ತದ ವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಸರ್ಕಾರ ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಪಪಂ ಸದಸ್ಯ ಶೇಷಪ್ಪ ಪೂಜಾರ, ಪ್ರಮುಖರಾದ ವಾಗೀಶ ಹಿರೇಮಠ, ಶರತ್ ನಾಯಕ, ಗ್ಯಾನಪ್ಪ ನಾಯಕ, ನಿಂಗಪ್ಪ ನಾಯಕ ನವಲಿ, ಶಿವಯ್ಯಸ್ವಾಮಿ ನವಲಿ, ಭೀಮನಗೌಡ ಹರ್ಲಾಪುರ, ಹನುಮಂತರೆಡ್ಡಿ ಮಹಲಿನಮನಿ, ಸುರೇಶ ಕುರುಗೋಡ, ಪೃಥ್ವಿ ಮ್ಯಾಗೇರಿ, ಶಿವಕುಮಾರ ಕೋರಿ, ಹರೀಶ ಪೂಜಾರ ಇದ್ದರು.