ಮೊಬೈಲ್ ಬದಲಿಗೆ ಸೋಪು ಬಂತು ಡುಂ ಡುಂ !

KannadaprabhaNewsNetwork | Published : Mar 28, 2025 12:32 AM

ಸಾರಾಂಶ

ಗ್ರಾಹಕರೋರ್ವರು ಅಮೇಜಾನ್ ನಲ್ಲಿ ಸುಮಾರು 32 ಸಾವಿರ ರೂಗಳ ಬೆಲೆ ಬಾಳುವ ವಿವೋ ವಿ 50 ಮೊಬೈಲ್ ನ್ನು ಮಾ. 19 ರಂದು ಬುಕ್ ಮಾಡಿದ್ದಾರೆ. ಆದರೆ ಮಾ 25 ರಂದು ಬಂದಿರುವ ಅಮೇಜಾನ್ ನ ಪಾರ್ಸೆಲ್ ನಲ್ಲಿ ಆರು ಸೋಪುಗಳು ಬಂದಿದ್ದು ಗ್ರಾಹಕರ ಆಕ್ರೋಶಕ್ಕ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಗ್ರಾಹಕರೋರ್ವರು ಅಮೇಜಾನ್ ನಲ್ಲಿ ಸುಮಾರು 32 ಸಾವಿರ ರೂಗಳ ಬೆಲೆ ಬಾಳುವ ವಿವೋ ವಿ 50 ಮೊಬೈಲ್ ನ್ನು ಮಾ. 19 ರಂದು ಬುಕ್ ಮಾಡಿದ್ದಾರೆ. ಆದರೆ ಮಾ 25 ರಂದು ಬಂದಿರುವ ಅಮೇಜಾನ್ ನ ಪಾರ್ಸೆಲ್ ನಲ್ಲಿ ಆರು ಸೋಪುಗಳು ಬಂದಿದ್ದು ಗ್ರಾಹಕರ ಆಕ್ರೋಶಕ್ಕ ಕಾರಣವಾಗಿದೆ. ಇಲ್ಲಿಯ ಸರಸ್ವತಿ ಪುರಂ ನ ಗೃಹಿಣಿಯೋರ್ವರು ಮೊಬೈಲ್ ಬುಕ್ ಮಾಡಿದ್ದರು. 25ರಂದು ಡೆಲಿವರಿ ಬಾಯ್ ಪಾರ್ಸೆಲ್ ತಂದ ಸಂದರ್ಭದಲ್ಲಿ ಗ್ರಾಹಕರು ಡೆಲಿವರಿ ಬಾಯ್ ಯಿಂದಲೇ ಪಾರ್ಸೆಲ್ ನ್ನು ಓಪನ್ ಮಾಡಿಸಿದ್ದಾರೆ. ಆ ವೇಳೆ ವಿಡಿಯೋವನ್ನೂ ಸಹ ಮಾಡಲಾಗಿದೆ. ಆ ವೇಳೆ ವಿವೋ ವಿ 50 ಎಂಬ ಬಾಕ್ಸ್ ಮಾಮೂಲಿನಂತೆ ತೆಳುವಾದ ಪ್ಲಾಸ್ಟಿಕ್ ಹಾಳೆಯೊಂದಿಗೆ ಸೀಲ್ ಆಗಿತ್ತು. ಪುನಃ ಬಿಚ್ಚುತ್ತಾ ಹೋದಂತೆ ಗ್ರಾಹಕರು ಮತ್ತು ಡೆಲಿವರಿ ಬಾಯ್ ಗೆ ಶಾಕ್ ಕಾದಿತ್ತು. ಕಾರಣ ಆ ಮೊಬೈಲ್ ಬಾಕ್ಸ್ ನಲ್ಲಿ ಸುಮಾರು ಆರು ಸೋಪಿನ ಪಾಕೆಟ್ ಗಳನ್ನು ಕಳಿಸಲಾಗಿತ್ತು. ಇದರಿಂದ ಗ್ರಾಹಕರು ಕಂಗಾಲಾದರು. ಡೆಲಿವರಿ ಬಾಯ್ ಸಹ ಶಾಕ್ ನೊಂದಿಗೆ ಅಸಹಾಯಕನಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಅಂತಿಮವಾಗಿ ಈ ಕುರಿತು ವಿಡಿಯೋ ಮತ್ತು ಫೋಟೋ ಸಹಿತ ಗ್ರಾಹಕರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹೋದರು. ಆ ವೇಳೆ ಅಮೇಜಾನ್ ಪಾರ್ಸೆಲ್‌ ವ್ಯವಸ್ಥಾಪಕ ಆಗಿರುವ ಪ್ರಮಾದವನ್ನು ದೊಡ್ಡದು ಮಾಡುವುದು ಬೇಡ. ಕೂಡಲೇ ಹೊಸದಾಗಿ ಮೊಬೈಲ್ ನ್ನು ಕಳಿಸುವ ಭರವಸೆಯನ್ನು ಗ್ರಾಹಕರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೊಬೈಲ್ ನ್ನು ತೆರೆಯುವ ಸಂಧರ್ಭದಲ್ಲಿ ಗ್ರಾಹಕರು ತಮಗೆ ಬಾಕ್ಸ್ ಓಪನ್ ಮಾಡಲು ಬರಲ್ಲ ಎಂದು ಹೇಳಿದ ಮೇರೆಗೆ ಡೆಲಿವರಿ ಬಾಯ್ ನಿಂದಲೇ ಗ್ರಾಹಕರು ಬಾಕ್ಸ್ ಓಪನ್ ಮಾಡಿಡಿದ್ದು ಅದನ್ನು ವಿಡಿಯೋ ಮಾಡಿರುವುದು ನೆಟ್ಟಿಗರ ಸಂತಸಕ್ಕೆ ಕಾರಣವಾಗಿದ್ದು ಕೆಲವರು ಗ್ರಾಹಕರ ಜಾಣ್ಮೆಗೆ ಬೇಷ್‌ ಎಂದಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಅಮಾಯಕ ಜನರು ತಾವು ಆರ್ಡರ್ ಮಾಡಿರುವ ವಸ್ತುಗಳನ್ನು ಡಿಲಿವರಿ ಬಾಯ್ ನೊಂದಿಗೆ ಓಪನ್ ಮಾಡಿಸದೇ ತಾವೇ ಓಪನ್ ಮಾಡುತ್ತಾರೆ. ವಿಡಿಯೋ ತೆಗೆದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಇಂತಹ ವಂಚನೆ ಆದರೆ ಅದನ್ನು ಗ್ರಾಹಕರು ಸಮರ್ಥಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ.

Share this article