ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವತಿಯಿಂದ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಉದ್ದಕ್ಕೂ ಸಂಚರಿಸುತ್ತಿರುವ ಸೈಕಲ್ ರ್‍ಯಾಲಿ ‘ಸಿಐಎಸ್‍ಎಫ್ ಕೋಸ್ಟಲ್ ಸೈಕ್ಲೋಥಾನ್- 2025’ ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಆಕರ್ಷಕ ಸ್ವಾಗತ ನೀಡಲಾಯಿತು.ಪಣಂಬೂರು ಬೀಚ್‍ನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನೇತೃತ್ವದಲ್ಲಿ ಸಿಐಎಸ್‍ಎಫ್ ಯೋಧರಿಗೆ ಸ್ವಾಗತ ಕೋರಲಾಯಿತು.ಸಿಐಎಸ್‍ಎಫ್ ಕೋಸ್ಟಲ್ ಸೈಕ್ಲೋಥಾನ್-2025ಕ್ಕೆ ಮಾ.7ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವರು ಗುಜರಾತ್‍ನಲ್ಲಿ ಚಾಲನೆ ನೀಡಿದ್ದರು. ಈಸ್ಟ್ ಕೋಸ್ಟ್ ತಂಡವು ಪಶ್ಚಿಮ ಬಂಗಾಳದ ಬಖಾಲಿ ಬೀಚ್‍ನಿಂದ 2778 ಕಿಮೀ ದೂರ ಕ್ರಮಿಸಲಿದ್ದು, ವೆಸ್ಟ್ ಕೋಸ್ಟ್ ತಂಡವು ಲಖ್ಪತ್ ಪೋರ್ಟ್ (ಗುಜರಾತ್)ನಿಂದ ಕನ್ಯಾಕುಮಾರಿವರೆಗೆ 3775 ಕಿ.ಮೀ. ದೂರ ಕ್ರಮಿಸಲಿದೆ. ವೆಸ್ಟ್ ಕೋಸ್ಟ್ ತಂಡದ ಸೈಕ್ಲಿಸ್ಟ್‌ಗಳು 3051 ಕಿಮೀ ದೂರವನ್ನು ಕ್ರಮಿಸಿದ ನಂತರ ಮಂಗಳೂರಿಗೆ ಆಗಮಿಸಿದ್ದಾರೆ.
ಸೈಕಲ್‍ನಲ್ಲಿ ಆಗಮಿಸಿದ ಯೋಧರನ್ನು ಸ್ವಾಗತಿಸಲು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹುಲಿವೇಷ ನೃತ್ಯ, ಚಂಡೆ ವಾದ್ಯ ಮೇಳ, ಭರತನಾಟ್ಯ, ಜನಪದ ನೃತ್ಯಗಳು ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪೊಲೀಸ್ ಅಧೀಕ್ಷಕ ಯತೀಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್, ಸಿಐಎಸ್‍ಎಫ್ ಡಿಐಜಿ ಆರ್. ಪೊನ್ನಿ, ಕೋಸ್ಟ್‌ಗಾರ್ಡ್ ಡಿಐಜಿ ಮುಹಮ್ಮದ್ ಶಹನವಾಝ್, ಸಿಐಎಸ್‍ಎಫ್ ಅಧಿಕಾರಿಗಳಾದ ವಿ.ಎಂ. ಜೋಷಿ, ಆರ್.ಪಿ. ಪಾಠಕ್, ಅನೂಪ್ ಸಿನ್ಹಾ ಮತ್ತಿತರರು ಇದ್ದರು.
ಗುರುವಾರ ಬೆಳಗ್ಗೆ 6:30ಕ್ಕೆ ಪಣಂಬೂರು ಬೀಚ್‍ನಿಂದ ಕನ್ಯಾಕುಮಾರಿ ಕಡೆಗೆ ಸೈಕ್ಲಿಸ್ಟ್‌ಗಳು ಪ್ರಯಾಣ ಮುಂದುವರಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಉಪಸ್ಥಿತರಿದ್ದು, ರ್‍ಯಾಲಿಯನ್ನು ಬೀಳ್ಕೊಟ್ಟರು.