ಕನ್ನಡಪ್ರಭ ವಾರ್ತೆ ಸಾಗರ
ಪೊಲೀಸ್ ಸ್ಟೇಷನ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಮಾತನಾಡಿ, ಕ್ಷೇತ್ರವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಪ್ರಕರಣ ಜಾಸ್ತಿಯಾಗಿದೆ. ಗಾಂಜಾ ಎಲ್ಲಿಂದ ಬರುತ್ತಿದೆ, ಯಾರಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಗೊತ್ತಿದ್ದರೂ ಅವರು ಗಮನ ಹರಿಸುತ್ತಿಲ್ಲ. ಹೊರ ಜಿಲ್ಲೆಗಳಿಂದ ಗಾಂಜಾ ಅಕ್ರಮವಾಗಿ ಸರಬರಾಜಾಗುತ್ತಿದೆ. ತಕ್ಷಣ ಇದರ ವಿರುದ್ದ ಕ್ರಮ ಜರುಗಿಸಬೇಕು. ಇಲ್ಲವಾದರೆ ಆಡಳಿತದ ವಿರುದ್ದ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಹೈರಾಣಾಗಿದ್ದಾರೆ. ತಮ್ಮ ಫಸಲು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ರೈತರು ಸಂಕಷ್ಟ ಸಂದರ್ಭದಲ್ಲಿ ನೆರವಾಗಲಿ ಎಂದು ಬೆಳೆವಿಮೆ ಪಾವತಿ ಮಾಡಿದ್ದಾರೆ. ಈತನಕ ಬೆಳೆವಿಮೆ ಬಂದಿಲ್ಲ. ರೈತರಿಗೆ ಸಮರ್ಪಕ ವಿದ್ಯುತ್ ಕೊಡಿಸಲು, ಬೆಳೆವಿಮೆ ಕೊಡಿಸಲು ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ಆಡಳಿತ ವೈಫಲ್ಯವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಪಕ್ಷದ ವತಿಯಿಂದ ಆಡಳಿತ ವೈಫಲ್ಯದ ವಿರುದ್ದ ನಿರಂತರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗಾಂಜಾಮುಕ್ತ ರಾಜ್ಯವಾಗಬೇಕಾದರೆ ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಡಿ. ತಮಗೆ ನ್ಯಾಯ ಸಿಗುವುದಿಲ್ಲವೆಂದು ಜನರು ಠಾಣೆಗೆ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಸರಕ್ಕೆ ಹಾನಿ ತರುವ ಪಂಪ್ಡ್ ಸ್ಟೋರೇಜ್ ಬೇಡವೆಂದು ವಾದ ಮಾಡಿದರೆ ಶಾಸಕರು ಬೇಕು ಎನ್ನುತ್ತಾರೆ. ಇದು ಸಾಮಾನ್ಯಜ್ಞಾನವಿಲ್ಲದ ಸರ್ಕಾರವಾಗಿದ್ದು ಗೂಂಡಾಗಿರಿಯನ್ನು ಪೋಷಿಸಿಕೊಂಡು ಬರುತ್ತಿದೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು, ದಿಶಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್, ಪ್ರಮುಖರಾದ ಪ್ರಸನ್ನ ಕೆರೆಕೈ, ದೇವೇಂದ್ರಪ್ಪ, ಮೈತ್ರಿ ಪಾಟೀಲ್, ವಿ.ಮಹೇಶ್, ಸತೀಶ್ ಕೆ., ಸಂತೋಷ್ ರಾಯಲ್, ಸಂತೋಷ್ ಶೇಟ್, ಆರ್.ಶ್ರೀನಿವಾಸ್, ಬಿ.ಎಚ್.ಲಿಂಗರಾಜ್, ಭೈರಪ್ಪ, ಪ್ರೇಮ ಸಿಂಗ್, ಅರುಣ ಕುಗ್ವೆ, ಪ್ರಶಾಂತ ಕೆ.ಎಸ್., ಹರೀಶ್ ಮೂಡಳ್ಳಿ ಇನ್ನಿತರರು ಹಾಜರಿದ್ದರು.