ಕನ್ನಡಪ್ರಭ ವಾರ್ತೆ ಹಾವೇರಿ
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಪಿ.ಬಿ. ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು, ಐಎನ್‌ಡಿಐ ಒಕ್ಕೂಟದ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ನಡೆ ಖಂಡಿಸಿ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಅವಮಾನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ಹಾಗೂ ಐಎನ್‌ಡಿಐ ಒಕ್ಕೂಟ ಮಾಡುತ್ತಿರುವ ಅವಮಾನ. ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ಉಪರಾಷ್ಟ್ರಪತಿಯವರನ್ನು ಲೇವಡಿ ಮಾಡಿದ್ದು ಉಪರಾಷ್ಟ್ರಪತಿಯಂಥ ಸಾಂವಿಧಾನಿಕ ಹುದ್ದೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಐಎನ್‌ಡಿಐ ಒಕ್ಕೂಟದ ಸದಸ್ಯರು ಮಾಡಿದ ಅಪಮಾನ ಎಂದು ದೂರಿದರು.ಉತ್ತರಭಾರತದ ಮೂರು ದೊಡ್ಡ ರಾಜ್ಯಗಳ ಚುನಾವಣಾ ಫಲಿತಾಂಶವು ಮೋದಿ ಗ್ಯಾರಂಟಿಯ ಪರವಾಗಿರುವುದನ್ನ ನೋಡಿ ಐಎನ್‌ಡಿಐ ಒಕ್ಕೂಟದ ನಾಯಕರಿಗೆ ನಿದ್ದೆ ಬರುತ್ತಿಲ್ಲ. ವಿನಾಕಾರಣ ದೇಶದ ಭದ್ರತೆಯ ಬಗ್ಗೆ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರಿಸುವಂತಹ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಶಾಸಕ ಶಿವರಾಜ್ ಸಜ್ಜನರ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಷ್ಟು ಅಪಾಯಕಾರಿಯೋ ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಅಧಿಕಾರ ಹಿಡಿಯಲು ವರ್ತಿಸುತ್ತದೆ. ಐಎನ್‌ಡಿಐ ಒಕ್ಕೂಟದ ಈ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯನ್ನು ದೇಶದ ಜನತೆ ಮತ್ತು ಬಿಜೆಪಿ ಕಾರ್ಯಕರ್ತರು ಪ್ರಬಲವಾಗಿ ಖಂಡಿಸಬೇಕು ಎಂದರು.
ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ ಹಾಗೂ ಜಿಲ್ಲೆಯ ಪದಾಧಿಕಾರಿಗಳು, ಮಂಡಲದ ಪದಾಧಿಕಾರಿಗಳು ಮತ್ತು ರಾಜ್ಯ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಇದ್ದರು.