ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕುಪ್ಪಾಳು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರವನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ತಾಲೂಕು ಘಟಕದ ವತಿಯಿಂದ ನಗರದ ತಾಲೂಕು ಪಂಚಾಯಿತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾ ಮುಖಂಡ ಗಂಗರಾಜು ಮಾತನಾಡಿ, ಇಲ್ಲಿನ ಶಾಸಕರು ಕಳೆದ ಎರಡೂವರೆ ವರ್ಷಗಳಿಂದಲೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹಿಂದಿನ ಶಾಸಕರು ಮಾಡಿದ್ದ ಯೋಜನೆ, ಅನುದಾನಗಳಿಗೆ ಗುದ್ದಲಿ ಪೂಜೆ ಮಾಡಿರುವುದು ಬಿಟ್ಟರೆ ಹೊಸದಾಗಿ ಕಾಮಗಾರಿಗಳನ್ನು ಪ್ರಾರಂಭಿಸಿಲ್ಲ. ಕೆಲ ಇಲಾಖೆಗಳ ಅಧಿಕಾರಿಗಳು ರೈತರಿಗೆ, ಸಾರ್ವಜನಿಕರಿಗೆ ಸ್ಪಂದಿಸದ ಕಾರಣ ಜನರು ಇಲಾಖೆಗಳಿಗೆ ಅಲೆದಾಡುವಂತಾಗಿದೆ. ತಾಲೂಕಿನ ಕುಪ್ಪಾಳು ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರು.ಅವ್ಯವಹಾರ ನಡೆದಿದ್ದು ಕಾಮಗಾರಿ ಮಾಡದೆ ಬಿಲ್ ಪಡೆಯಲಾಗಿದ್ದು ಸರ್ಕಾರದ ಹಣ ಪೋಲಾಗುತ್ತಿದೆ. ಇಲ್ಲಿನ ಗಿಣಕೀಕೆರೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಸುತ್ತಲೂ ತಂತಿ ಬೇಲಿ ನಿರ್ಮಾಣ ಕಾಮಗಾರಿ ಮಾಡಲಾಗಿದೆ ಎಂದು ಬಿಲ್ ಪಡೆಯಲಾಗಿದೆ. ಆದರೆ ಯಾವುದೇ ಕಾಮಗಾರಿ ಮಾಡಿಲ್ಲ. ಎನ್‌ಆರ್‌ಇಜಿ ಯೋಜನೆಯಡಿ ಕೆಲಸಗಳಾಗದೆ ಬಿಲ್ ಮಾಡಿಕೊಂಡಿದ್ದು ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದ್ದರೂ ಶಾಸಕರು ಸೇರಿದಂತೆ ತಾಪಂ ಇಒಗೆ ತಿಳಿದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇಲ್ಲಿನ ಕೆಲ ಗ್ರಾಪಂ ಸದಸ್ಯರು ಈ ಬಗ್ಗೆ ಖುದ್ದು ಇಒಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ನಾಗರಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಮೇಲೆ 124 ಜಾರಿಯಾಗಿ ಮೂರ‍್ನಾಲ್ಕು ತಿಂಗಳಾದರು ಕ್ರಮ ಕೈಗೊಂಡಿಲ್ಲ ಇದು ತಾಲೂಕು ಆಡಳಿತದ ಭ್ರಷ್ಟಾಚಾರಕ್ಕಿಡಿದ ಕೈಗನ್ನಡಿಯಾಗಿದೆ. ಕೂಡಲೆ ಕುಪ್ಪಾಳು ಗ್ರಾಮ ಪಂಚಾಯಿತಿ ಅವ್ಯವಹಾರದ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಮತ್ತು ಅರಳಗುಪ್ಪೆಯ ಇಂದಿರಾಗಾಂದಿ ವಸತಿ ಶಾಲೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ತಾ.ಪಂ ಇಒ ಸುದರ್ಶನ್ ಆಗಮಿಸಿ ಕುಪ್ಪಾಳು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡದಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಮುಖಂಡರಾದ ಗಂಗಾಧರ್, ಆಯರಹಳ್ಳಿ ಶಂಕರಪ್ಪ, ನಗರಾಧ್ಯಕ್ಷ ಜಗದೀಶ್, ಕುಪ್ಪಾಳು ಗ್ರಾ.ಪಂ ಸದಸ್ಯೆ ರೂಪ, ರಂಗಾಪುರ ಗ್ರಾ.ಪಂ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಸುರೇಶ್, ಮಂಜುನಾಥ್, ಸತೀಶ್, ಕೆ.ಎಸ್. ಸದಾಶಿವಯ್ಯ ಮತ್ತಿತರರಿದ್ದರು.