ಹಣ ದುರ್ಬಳಕೆ ವಿರುದ್ಧ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Mar 4, 2025 12:37 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡಿರುವ ದಲಿತ ದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡಿರುವ ದಲಿತ ದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮಾಗಾಂಧಿ ವೃತ್ತದಿಂದ ಡಾ.ಅಂಬೇಡ್ಕರ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾಜಿ ಸಂಸದ ಉಮೇಶ ಜಾಧವ ಮಾತನಾಡಿ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ದಲಿತ ದ್ರೋಹಿ ಸರ್ಕಾರ. ಇದರ ವಿರುದ್ಧ ಜನಾಂದೋಲನ ಹೋರಾಟದ ನಡೆಸುವುದು ಅನಿವಾರ್ಯವಾಗಿದೆ. ಎಸ್ಇಪಿ ಹಾಗೂ ಟಿಎಸ್‌ಪಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಹಿನ್ನಲೆ ಸರ್ಕಾರ ದಿವಾಳಿಯಾಗಿದೆ. ರಾಜ್ಯಾದ್ಯಂತ ಹದಿನಾಲ್ಕು ಸಮಿತಿ ಮಾಡಿ ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಎಸ್ಸಿ,ಎಸ್ಟಿ ಹಣ ಬಳಕೆ ಮಾಡಿಕೊಂಡಿದ್ದು ಅಪರಾಧ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತರಿಗೆ ಮೋಸ ಮಾಡಿದೆ.

ದಲಿತೋದ್ದಾರಕ್ಕಾಗಿ ಈ ಹಣ ಬಳಕೆಯಾಗಬೇಕಿತ್ತು. ಮಾತೆತ್ತಿದರೆ ಅಹಿಂದ ಎನ್ನುವ ಸಿಎಂ ಮೋಸ ಮಾಡುತ್ತಿದ್ದಾರೆ, ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಎಸ್ಇ‌ಪಿ ಹಾಗೂ ಟಿಎಸ್‌ಪಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ದಲಿತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ದೇಶದಲ್ಲಿ ಪರಿಶಿಷ್ಟ ಜಾತಿಯ 20.13 ಕೋಟಿ ಹಾಗೂ ಪರಿಶಿಷ್ಟ‌‌ ಪಂಗಡದ 10.42 ಕೋಟಿ ಜನಸಂಖ್ಯೆ ಇದೆ. ರಾಜ್ಯದಲ್ಲಿ 1.4 ಕೋಟಿ ಪರಿಶಿಷ್ಟ ಜಾತಿ ಹಾಗೂ 42 ಲಕ್ಷ ಪರಿಶಿಷ್ಟ ಪಂಗಡದ ಜನಸಂಖ್ಯೆ ಇದೆ. ಅವರ ಜೀವನ ಮಟ್ಟ ಸುಧಾರಣೆಗೆ ಅಭಿವೃದ್ಧಿಗೆ ಹಣ ಮೀಸಲು ಇಡಲಾಗಿತ್ತು. 5ನೇ ಪಂಚವಾರ್ಷಿಕ ಯೋಜನೆಯಲ್ಲಿ ಚಿಂತನೆ ಮಾಡಲಾಗಿತ್ತು. ನಂತರ ಏಳನೇ ಪಂಚ ವಾರ್ಷಿಕ ಯೋಜನೆಯಲ್ಲಿ ಕಾರ್ಯರೂಪಕ್ಕೆ ಬಂತು. ಅದಕ್ಕೆ ಕಾಯ್ದೆ ತಂದಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ರಾಜ್ಯದಲ್ಲಿ ದೊಡ್ಡದಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರು. ಎಸ್ಸಿಎಸ್ಟಿಗೆ ಮೀಸಲಿಟ್ಟ ₹ 12000 ಕೋಟಿ ಹಣವನ್ನು ಮೊದಲ ಬಜೆಟ್‌ನಲ್ಲಿ ತೆಗೆದುಕೊಂಡರು. ₹ 14000 ಕೋಟಿ ಎರಡನೇ ಬಜೆಟ್‌ನಲ್ಲಿ ಪಡೆದರು. ಈಗಿನ ಬಜೆಟ್‌ನಲ್ಲಿ ₹ 14, 480 ಕೋಟಿಗೂ ಅಧಿಕ ಹಣ ತೆಗೆದುಕೊಳ್ಳಲು ಮುಂದಾಗಿದ್ದಾರೆಂದು ಆರೋಪಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದಲಿತ ಸಮಾಜದ ಹಣ ಮಾತ್ರ ಮುಟ್ಟಿದ್ದೀರಿ. ಅಲ್ಪಸಂಖ್ಯಾತರ ಮೀಸಲು ಹಣ ಯಾಕೆ ಮುಟ್ಟಿಲ್ಲ?. ಸಿಎಂಗೆ ದಲಿತರ ಮೇಲೆ ಅಭಿಮಾನ ಇದ್ದರೆ ₹ 29000 ಕೋಟಿ ಹಣ ಪಡೆದಿದ್ದನ್ನು ಸರಿ ಪಡಿಸಬೇಕು, ಇಲ್ಲವಾದರೆ ಇನ್ನೂ ಉಗ್ರ ಹೋರಾಟ ಮಾಡುತ್ತೇವೆ. ದಲಿತ ಸಮಾಜದ ಪರಮೇಶ್ವರ, ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಯಾಕೆ ಸುಮ್ಮನಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಗಂಗಾ ಕಲ್ಯಾಣ ಯೋಜನೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ದಲಿತರಿಗೆ ಭೂಮಿ‌ ಖರೀದಿ ಮಾಡಲು ಯೋಜನೆ ಮಾಡಿದ್ದೇ ನಾನು. ಅಂದು ನಾನು ಇದರ ಬಗ್ಗೆ ಧ್ವನಿ ಎತ್ತಿರದಿದ್ದರೆ ಇಂದು ಈ ಯೋಜನೆಗಳೇ ಇರುತ್ತಿರಲಿಲ್ಲ. ನಮ್ಮ ದಲಿತ ಜನರ ಅಭಿವೃದ್ಧಿಗೆ ಇಷ್ಟು ಹಣ ಇರುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ನಾಯಕಾರದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ರಮೇಶ ಭೂಸನೂರ, ಬಳ್ಳಾರಿ ಹನುಮಂತಪ್ಪ, ಕಾಸುಗೌಡ ಬಿರಾದಾರ, ಸಂಜೀವ ಐಹೊಳ್ಳಿ, ವಿಜಯ ಜೋಶಿ, ಗೋಪಾಲ ಘಟಕಾಂಬಳೆ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Share this article