-ಜೇವರ್ಗಿಯಲ್ಲಿ ಪುರಸಭೆ ಮುಂದೆ ಬಿಜೆಪಿ ಮುಖಂಡರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಜೇವರ್ಗಿ
ಪುರಸಭೆಯ ಬಿಜೆಪಿ ಬೆಂಬಲಿತ ಕಾಂಗ್ರೆಸ್ ಸದಸ್ಯರಿಬ್ಬರನ್ನು ಪೊಲೀಸ್ ಬಂದೋಬಸ್ತ್ ನಡುವೆ ಗೈರಾಗುವಂತೆ ಮಾಡಿದ್ದನ್ನು ವಿರೋಧಿಸಿ ಪೊಲೀಸ್ ಇಲಾಖೆಯ ಪಿತೂರಿಯಿಂದ ಸಂವಿಧಾನದ ಕಗ್ಗೊಲೆಯಾಗಿದೆ ಎಂದು ಬಿಜೆಪಿ ಮುಖಂಡರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು. ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಕೊನೆಯ ಕ್ಷಣಾರ್ಧದಲ್ಲಿ ಇಬ್ಬರು ಬಿಜೆಪಿ ಬೆಂಬಲಿತ ಕಾಂಗ್ರೆಸ್ ಸದಸ್ಯರನ್ನು ಪುರಸಭೆಯ ದ್ವಾರ ಬಾಗಿಲು ಬಳಿಯೇ ಗದ್ದಲದ ನಡುವೆ ಗುದ್ದಾಟ ನಡೆಸಿ, ಇಬ್ಬರು ಸದಸ್ಯರನ್ನು ಹೊರ ಉಳಿಯುವಂತೆ ಮಾಡಲಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಜೆಡಿಎಸ್ ಪರವಾಗಿ ಕಾಂಗ್ರೆಸ್ ಅಣತೆಯಂತೆ ಸಂವಿಧಾನ ವಿರೋಧಿ ಕೆಲಸ ಮಾಡಿದೆ. ಕೂಡಲೇ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಮುಂದೂಡಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಘೋಷಣೆ ನಂತರ ಆಕ್ರೋಶ ಭರಿತ ಬಿಜೆಪಿ ಮುಖಂಡರು ಸ್ಥಳೀಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಸೂಕ್ತ ತನಿಖೆ ಕೈಗೊಂಡು ಚುನಾವಣೆ ರದ್ದು ಗೊಳಿಸುವಂತೆ ಒತ್ತಾಯಿಸಿದರು.
ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಬಿಜೆಪಿ ಗ್ರಾಮೀಣ ಘಟಕದ ಮಾಜಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಹಿರಿಯ ಮುಖಂಡ ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಶೋಭಾ ಬಾಣಿ, ಬಸವರಾಜ ಕುಕನೂರ, ದೇವಿಂದ್ರಪ್ಪ ಮುತ್ತಕೋಡ, ರೇವಣಸಿದ್ದಪ್ಪ ಸಂಕಾಲಿ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಬಾಗೇಶ ಹೋತಿನಮಡು, ತಿಪ್ಪಣ್ಣ ರಾಠೋಡ, ಬಾಬು ಬಿ ಪಾಟೀಲ್, ಸುರೇಶ ನೇದಲಗಿ, ಸಾಗರ, ಈರಣ್ಣ ಯಾದವ್ ಸೇರಿದಂತೆ ಬಿಜೆಪಿ ಕಾರ‍್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.