ಕನ್ನಡಪ್ರಭ ವಾರ್ತೆ ಹಾಸನಯುದ್ಧದ ಪರಿಣಾಮ ಆಮದಾಗುವ ಕಚ್ಚಾ ತೈಲಗಳ ಪ್ರಮಾಣ ಕಡಿತಗೊಂಡು ದೇಶದ ಪರಿಸ್ಥಿತಿ ಗಂಭೀರವಾಗಿರುವಾಗ ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸಂಸದರೊಂದಿಗೆ ಹರಟೆ ಹೊಡೆದು ಸಮಯ ವ್ಯರ್ಥ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಪಕ್ಷದಿಂದ ಶನಿವಾರ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದೇ ವೇಳೆ ಬಿಜೆಪಿ ನಗರಾಧ್ಯಕ್ಷ ಯೋಗೀಶ್ ಗೌಡ ಮತ್ತು ಮಾಧ್ಯಮ ಪ್ರಮುಖ್ ವೇದಾವತಿ ಮಾಧ್ಯಮದೊಂದಿಗೆ ಮಾತನಾಡಿ, ಯುದ್ಧದ ಪರಿಣಾಮವಾಗಿ ಅನೇಕ ರಾಷ್ಟ್ರಗಳಲ್ಲಿ ಕಚ್ಚಾ ತೈಲದ ಆಮದು ಮತ್ತು ಪೂರೈಕೆ ವ್ಯತ್ಯಯವಾಗುವ ಸಾಧ್ಯತೆಗಳಿದ್ದು, ಇದರಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಒತ್ತಡ ಹೆಚ್ಚಾಗುತ್ತಿದೆ ಎಂದರು. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ದೊಡ್ಡ ಕೊರತೆ ಉಂಟಾಗಿಲ್ಲ. ಕೇಂದ್ರ ಸರ್ಕಾರ ಸಮರ್ಪಕ ಕ್ರಮಗಳನ್ನು ಕೈಗೊಂಡಿರುವುದರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇಂತಹ ಸಮಯದಲ್ಲಿ ದೇಶದ ಪ್ರಮುಖ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರು ರಾಷ್ಟ್ರದ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಚಿಂತಿಸುವ ಬದಲು ತಮ್ಮ ಪಕ್ಷದ ಲೋಕಸಭಾ ಸದಸ್ಯರೊಂದಿಗೆ ರಾಜಕೀಯ ಚರ್ಚೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದರು. ದೇಶದ ಸಂಕಷ್ಟದ ಸಂದರ್ಭಗಳಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ರಾಜಕೀಯ ಆರೋಪ ಮಾಡುವುದಕ್ಕಿಂತ ರಾಷ್ಟ್ರದ ಹಿತದೃಷ್ಟಿಯಿಂದ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ದೇಶದ ಆರ್ಥಿಕತೆ, ಇಂಧನ ಭದ್ರತೆ ಹಾಗೂ ಜನರ ಬದುಕಿಗೆ ಸಂಬಂಧಿಸಿದಂತಹ ಮಹತ್ವದ ವಿಚಾರಗಳಲ್ಲಿ ಪ್ರತಿಪಕ್ಷ ನಾಯಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅನಗತ್ಯ ಆರೋಪಗಳು ಹಾಗೂ ದೇಶದ ಹಿತಾಸಕ್ತಿಗೆ ಧಕ್ಕೆಯುಂಟುಮಾಡುವ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಹೇಳಿಕೆಗಳು ದೇಶದ ಚಿತ್ರಣಕ್ಕೂ ಹಾನಿ ಉಂಟುಮಾಡಬಹುದು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ಯಾವುದೇ ರಾಜಕೀಯ ಹೇಳಿಕೆಗಳು ಅಥವಾ ಕ್ರಮಗಳನ್ನು ಬಿಜೆಪಿ ಸಹಿಸುವುದಿಲ್ಲ. ದೇಶದ ಸಂಕಷ್ಟದ ಸಂದರ್ಭಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ದೇಶದ ಪರವಾಗಿ ನಿಲ್ಲಬೇಕು ಮತ್ತು ಉತ್ತಮ ಸಲಹೆ ನೀಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ, ಜಿಲ್ಲಾ ವಕ್ತಾರ ಮೋಹನ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿ ರಾಜೀವ್, ವಿಶಾಲಾಕ್ಷಿ ಸೇರಿದಂತೆ ಪಕ್ಷದ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.