ರಾಜ್ಯ ಬಜೆಟ್‌ ವಿರೋಧಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Mar 14, 2025 12:32 AM

ಸಾರಾಂಶ

ಜನ, ರೈತ ವಿರೋಧಿ ರಾಜ್ಯ ಬಜೆಟ್‌ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜನ, ರೈತ ವಿರೋಧಿ ರಾಜ್ಯ ಬಜೆಟ್‌ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು ಚಕ್ಕಡಿ, ಟ್ರ್ಯಾಕ್ಟರ್‌ಗಳ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ರಾಜ್ಯದ 2025-26ರ ಬಜೆಟ್ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯ ಓಲೈಸಲು ಒತ್ತು ನೀಡಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಇದು ಜನತೆ ನಿರೀಕ್ಷೆ ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸಿ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ. ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೂ ಇಲ್ಲ ಎಂದು ಕಿಡಿ ಕಾರಿದರು.

ವಿಶೇಷವಾಗಿ ಕೃಷಿ ವಲಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೈತರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ. ದಿನೇ ದಿನೇ ಗ್ರಾಮೀಣ ಪ್ರದೇಶಗಳಿಂದ ಗುಳೇ ಹೋಗುವ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ, ಅದನ್ನು ತಡೆಯುವ ಯಾವುದೇ ಕಾರ್ಯಕ್ರಮವನ್ನೂ ಪ್ರಕಟಿಸಿಲ್ಲ. ಹಾಗಾಗಿ ಇದು ಗ್ರಾಮೀಣ ಹಾಗೂ ರೈತ ವಿರೋಧಿ ಬಜೆಟ್ ಆಗಿದೆ ಎಂದು ಆರೋಪಿಸಿದರು.

ಸರ್ಕಾರಿ ಶಾಲೆಗಳ ಕಟ್ಟಡಗಳ ವಿಸ್ತರಣೆ ಹಾಗೂ ನವೀಕರಣಕ್ಕೆ ಬಜೆಟ್‌ನಲ್ಲಿ ಯಾವುದೇ ಹಣ ನೀಡದೇ, ಕೇವಲ 5,000 ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವುದಾಗಿ ಘೋಷಿಸಿದ್ದಾರೆ. ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಕರ್ಯದತ್ತ ದೃಷ್ಟಿ ಹರಿಸದೆ ಕೈ ತೊಳೆದುಕೊಳ್ಳಲಾಗಿದೆ. 9 ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ತೀವ್ರವಾಗಿ ಖಂಡಿಸಿದರು.

ಸಾಂಸ್ಕೃತಿಕ ವಲಯ ಹಾಗೂ ಪ್ರವಾಸೋದ್ಯಮವನ್ನು ಬಹುವಾಗಿ ವಿಸ್ತರಿಸುವ ನಿರ್ದಿಷ್ಟವಾದ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸದೇ ಈ ಕ್ಷೇತ್ರಗಳ ಬೆಳವಣಿಗೆ ಪ್ರೋತ್ಸಾಹ ನೀಡುವ ಪೊಳ್ಳು ಭರವಸೆ ನೀಡಲಾಗಿದೆ. ಪರಿಶಿಷ್ಟ, ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯದವರ ಜಪ ಮಾಡಿ ರಾಜಕೀಯವಾಗಿ ಬೆಳೆದು ಬಂದ ಸಿದ್ದರಾಮಯ್ಯನವರು ಈ ಸಮುದಾಯಗಳ ಏಳಿಗೆಗೆ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ವಿವಿಧ ಹಿಂದುಳಿದ ವರ್ಗಗಳ ನಿಗಮಗಳಿಗೆ ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾದ ಪೂರ್ಣ ಪ್ರಮಾಣದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂದರು.

ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಅನಿಲ್ ಬೆನಕೆ, ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಜಿರಲಿ ಮಾತನಾಡಿ, ಕುಲಕಸುಬು ಆಧಾರಿತ ಸಮುದಾಯಗಳ ಬದುಕು ರಕ್ಷಿಸಲು ಯಾವುದೇ ಕಾರ್ಯಕ್ರಮಗಳನ್ನು ಕೊಡದೇ ಕೇವಲ ಅಧಿಕಾರಕ್ಕೆ ಬರಲು ಮಾತ್ರ ದಲಿತ, ಹಿಂದುಳಿದವರ ಜಪ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಭಿವೃದ್ಧಿಯಲ್ಲಿ ಹಿಂದುಳಿದ ಸಮುದಾಯಗಳ ಕಷ್ಟದ ತಾಪವನ್ನು ಕಡಿಮೆ ಮಾಡುವ ಯಾವುದೇ ಯೋಜನೆ ಪ್ರಕಟಿಸದೇ ಒಬಿಸಿ ಸಮುದಾಯಗಳ ಹಿತಾಸಕ್ತಿಯನ್ನು ಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಹಾಂತೇಶ ದೊಡ್ಡಗೌಡರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಬೂದಿಹಾಳ, ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ ದೇಶಪಾಂಡೆ, ಧನಶ್ರೀ ದೇಸಾಯಿ ಮುಖಂಡರಾದ ಮುರುಗೇಂದ್ರಗೌಡ ಪಾಟೀಲ, ಸೋನಾಲಿ ಸರ್ನೋಬತ್, ಕಲ್ಲಪ್ಪ ಶಹಾಪೂರಕರ ಮೊದಲಾದವರು ಪಾಲ್ಗೊಂಡಿದ್ದರು.

Share this article